ಬೆಂಗಳೂರು: ಫ್ರೀಡಂ ಪಾರ್ಕ್‌ನಲ್ಲಿ ಜಿ ರಾಮ್ ಜಿ ಯೋಜನೆ ವಿರುದ್ಧ ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ಪ್ರತಿಭಟನೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಲೆಗೆ ಟವೆಲ್ ಪೇಟ ಸುತ್ತಿದ ಕ್ಷಣ ಗಮನ ಸೆಳೆಯಿತು.
ಪ್ರತಿಭಟನೆಯ ವೇಳೆ ಮೊದಲು ತಮ್ಮ ಹೆಗಲಿನ ಮೇಲೆ ಇದ್ದ ಟವೆಲ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತಲೆಗೆ ಕಟ್ಟಿಕೊಂಡರು. ನಂತರ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲ ಕೂಡ ತಲೆಗೆ ಟವೆಲ್ ಸುತ್ತಿಕೊಂಡರು. ಬಳಿಕ ಭಾಷಣ ಮುಗಿಸಿ ಬಂದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಲೆಗೆ ಸುರ್ಜೇವಾಲ ಟವೆಲ್ ಸುತ್ತಿದರು.
ಆದರೆ ಅದು ಸರಿಯಾಗಿ ಕಟ್ಟದ ಕಾರಣ, ಮುಖ್ಯಮಂತ್ರಿ ಸಿದ್ದರಾಮಯ್ಯ ನಗುನಗುತ್ತಲೇ ಡಿ.ಕೆ. ಶಿವಕುಮಾರ್ ತಲೆಗೆ ಸರಿಯಾಗಿ ಟವೆಲ್ ಪೇಟ ಸುತ್ತಿದರು. ಈ ವೇಳೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲ ಮೂವರು ನಾಯಕರು ತಲೆಗೆ ಟವೆಲ್ ಕಟ್ಟಿಕೊಂಡು ಒಟ್ಟಾಗಿ ಪೋಸ್ ನೀಡಿದರು.
ಇನ್ನೂ ಪ್ರತಿಭಟನೆ ಮುಗಿದ ಬಳಿಕ ಕಾಂಗ್ರೆಸ್ ನಾಯಕರು ಲೋಕಭವನಕ್ಕೆ ಮುತ್ತಿಗೆ ಹಾಕಲು ಮುಂದಾದರು. ಈ ಹಿನ್ನೆಲೆಯಲ್ಲಿ ಲೋಕಭವನದ ಸುತ್ತಮುತ್ತ ಹಾಗೂ ರಸ್ತೆಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಅಲ್ಲದೆ, 26 ಕಾಂಗ್ರೆಸ್ ನಾಯಕರಿಗೆ ರಾಜ್ಯಪಾಲರನ್ನು ಭೇಟಿಯಾಗಲು ಅವಕಾಶ ಕಲ್ಪಿಸಲಾಗಿದೆ. ಫ್ರೀಡಂ ಪಾರ್ಕ್‌ನಿಂದ ಕಾಂಗ್ರೆಸ್ ನಾಯಕರನ್ನು ಕರೆದೊಯ್ಯಲು ಬಿಎಂಟಿಸಿ ಬಸ್‌ಗಳನ್ನು ಸಿದ್ಧಪಡಿಸಲಾಗಿದೆ.



