ಸಿಎಂ ಸಿದ್ದರಾಮಯ್ಯ ಸೂಚನೆ: ತೊಂದರೆಗೊಳಗಾದ ಕನ್ನಡಿಗರ ರಕ್ಷಣೆಗೆ ಕಾಶ್ಮೀರಕ್ಕೆ ತೆರಳಿದ ಸಚಿವ ಸಂತೋಷ್ ಲಾಡ್

0
Spread the love

ವಿಜಯಸಾಕ್ಷಿ ಸುದ್ದಿ, ಧಾರವಾಡ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆಯ ಮೇರೆಗೆ ಸಚಿವ ಸಂತೋಷ್ ಲಾಡ್ ಕಾಶ್ಮೀರಕ್ಕೆ ತೆರಳಿ ತೊಂದರೆಗೊಳಗಾದ ಕನ್ನಡಿಗರ ರಕ್ಷಣೆಗೆ ಮುಂದಾಗಿದ್ದಾರೆ. ಉಗ್ರರ ದಾಳಿಯಲ್ಲಿ ಮೃತಪಟ್ಟವರ ಗುರುತು ಪತ್ತೆಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಮೃತರ ಸಂಬಂಧಿಕರಿಗೆ ನೆರವು ನೀಡಿದ್ದಾರೆ.

Advertisement

ಪಹಲ್ಗಾಮ್‌ನಲ್ಲಿ ಮೃತದೇಹಗಳನ್ನು ಇರಿಸಲಾಗಿದ್ದು, ಮೃತರ ಸಂಬಂಧಿಕರೊಂದಿಗೆ ಪಾರ್ಥಿವ ಶರೀರಗಳನ್ನು ಗುರುತಿಸಲು ನೆರವಾಗಿ, ಮೃತದೇಹಗಳು ನಿಮ್ಮ ಸಂಬಂಧಿಕರದ್ದೇ ಎಂಬುದನ್ನು ಖಚಿತಪಡಿಸಿಕೊಳ್ಳಿ ಎಂದು ತಿಳಿಸಿದರಲ್ಲದೆ, ಎಷ್ಟು ಜನ ಬಂದಿದ್ದೀರಿ ಎಂಬ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಯಾವ ಮೃತದೇಹಗಳನ್ನು ಈಗಾಗಲೇ ನೋಡಲಾಗಿದೆ ಎಂಬುದನ್ನೂ ಸಹ ಅವರು ತಪಾಸಣೆ ಮಾಡುತ್ತಿದ್ದಾರೆ.

ಮೃತದೇಹಗಳನ್ನು ಇರಿಸಲಾಗಿರುವ ಪೆಟ್ಟಿಗೆಗಳ ಮೇಲೆ ದೂರವಾಣಿ ಸಂಖ್ಯೆಗಳನ್ನು ನಮೂದಿಸಲಾಗಿದ್ದು, ಸಂಬಂಧಿಕರಿಗೆ ಕರೆ ಮಾಡಿ ಸ್ವತಃ ಸಂತೋಷ್ ಲಾಡ್ ಅವರೇ ತಿಳಿಸುತ್ತಿದ್ದಾರೆ. `ಮೃತದೇಹಗಳನ್ನು ಕರ್ನಾಟಕಕ್ಕೆ ತರಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುವುದು. ತೊಂದರೆಗೊಳಗಾದವರಿಗೆ ಅಗತ್ಯ ನೆರವನ್ನು ನೀಡಲಾಗುವುದು. ನಮ್ಮ ಸರ್ಕಾರ ಎಲ್ಲಾ ರೀತಿಯಲ್ಲಿ ಸಹಾಯ ಮಾಡಲಿದೆ’ ಎಂದು ಲಾಡ್ ಅವರು ತಿಳಿಸಿದ್ದಾರೆ.

ಪಹಲ್ಗಾಮ್‌ನಲ್ಲಿ ನಡೆದ ದಾಳಿಯಲ್ಲಿ ತೊಂದರೆಗೊಳಗಾಗಿರುವ ಕನ್ನಡಿಗ ಪ್ರವಾಸಿಗರು ಸಚಿವ ಸಂತೋಷ್ ಲಾಡ್ ಅವರ ಸಹಾಯಕ್ಕೆ ಧನ್ಯವಾದ ಹೇಳಿದ್ದಾರೆ. `ಸಚಿವ ಲಾಡ್ ಅವರಿಗೆ ಬೆಳಿಗ್ಗೆ ಕರೆ ಮಾಡಿದ್ದೆ. ಅವರು ಹತ್ತು ನಿಮಿಷದಲ್ಲಿ ಬರುತ್ತೇನೆ ಎಂದಿದ್ದರು. ಅವರು ಹೇಳಿದಂತೆ ತಮ್ಮ ತಂಡದೊಂದಿಗೆ ಇಲ್ಲಿಗೆ ಬಂದರು. ಎಲ್ಲಾ ಭದ್ರತಾ ಕ್ರಮಗಳನ್ನು ಕೈಗೊಂಡರು. ಸಂತೋಷ್ ಲಾಡ್ ಹಾಗೂ ಕರ್ನಾಟಕ ಸರ್ಕಾರ ಸದಾ ನಮ್ಮೊಂದಿಗೆ ಇದೆ ಎಂದು ಪ್ರವಾಸಿಗರೊಬ್ಬರು ಕರ್ನಾಟಕ ಸರಕಾರಕ್ಕೆ ಹಾಗೂ ಸಚಿವ ಲಾಡ್ ಅವರಿಗೆ ಧನ್ಯವಾದ ಹೇಳಿದ್ದಾರೆ. ಸಂತ್ರಸ್ತರಾಗಿರುವ ಕನ್ನಡಿಗ ಪ್ರವಾಸಿಗರಿಗೆ ಲಾಡ್ ಅವರು ಧೈರ್ಯ ಹೇಳಿ ಅವರ ಯೋಗಕ್ಷೇಮವನ್ನೂ ವಿಚಾರಿಸಿದರು.

ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿರಿಸಿಕೊಂಡು ನಡೆದ ದಾಳಿಯಲ್ಲಿ ಸಂತ್ರಸ್ತರಾದವರ ರಕ್ಷಣೆಗೆ ಕರ್ನಾಟಕದಿಂದ ಧಾವಿಸಿರುವ ಕಾರ್ಮಿಕ ಸಚಿವ ಸಂತೋಷ್ ಲಾಡ್, ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ವಿವರಣೆ ನೀಡಿದರು.

ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರೊಂದಿಗೆ ಮಾತನಾಡಿದ ಸಚಿವ ಸಂತೋಷ್ ಲಾಡ್, ರಕ್ಷಣಾ ಕಾರ್ಯದ ಬಗ್ಗೆ ವಿವರಣೆ ನೀಡಿದರು. ಉಗ್ರರ ದಾಳಿಯಲ್ಲಿ ಮೃತರಾದವರ ಪಾರ್ಥಿವ ಶರೀರವನ್ನು ಶ್ರೀನಗರದಲ್ಲಿ ಇರಿಸಲಾಗಿದ್ದು, ಈ ವೇಳೆ ಸಚಿವ ಸಂತೋಷ್ ಲಾಡ್ ಮೃತದೇಹಗಳಿಗೆ ನಮನ ಸಲ್ಲಿಸಿದರು


Spread the love

LEAVE A REPLY

Please enter your comment!
Please enter your name here