ಯಾದಗಿರಿ: ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು 1 ವರ್ಷ 4 ತಿಂಗಳಾಗಿವೆ. ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ನಡುವೆ ಸಿಎಂ ಕುರ್ಚಿ ಹಂಚಿಕೆ 50-50 ಅಂದರೂ ಇನ್ನು ಒಂದು ವರ್ಷ ಬಾಕಿ ಇದೆ. ಆದರೆ, ಈ ನಡುವೆ ಸಿಎಂಗೆ ಮುಡಾ ಹಗರಣದ ಆರೋಪ ಎದುರಾಗಿದೆ. ಈ ಬೆನ್ನೆಲ್ಲೆ ದೇವರ ಹಾಗೂ ಪೂಜಾರಿಗಳ ಭವಿಷ್ಯವಾಣಿಗಳು ಚರ್ಚೆಗೆ ಬಂದಿವೆ.
ಹೌದು ರಾಜ್ಯದಲ್ಲಿ ಸಿಎಂ ಬದಲಾವಣೆಯಾಗಲಿದ್ದು, ಡಿಕೆ ಶಿವಕುಮಾರ್ ಮುಂದಿನ ಸಿಎಂ ಆಗಲಿದ್ದಾರೆ ಎಂದು ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಗೋನಾಲ ಗ್ರಾಮದ ಗಡೇ ದುರ್ಗಾದೇವಿ ದೇವಸ್ಥಾನದ ಅರ್ಚಕ ಮಹಾದೇವಪ್ಪ ಪೂಜಾರಿ ಭವಿಷ್ಯ ನುಡಿದಿದ್ದಾರೆ.
ಈ ಬಗ್ಗೆ ಮಾತನಾಡಿರುವ ಮಹಾದೇವಪ್ಪ ಪೂಜಾರಿ ವಿಡಿಯೋ ವೈರಲ್ ಆಗಿದೆ. ಅದರಲ್ಲಿ ಪೂಜಾರಿ ” ನನ್ನ ಕನಸಿನಲ್ಲಿ ದೇವಿ ಬರಲಿದ್ದು, ಮುಂದಿನ ಭವಿಷ್ಯವನ್ನು ಹೇಳುತ್ತಾಳೆ. ಕನಸಿನಲ್ಲಿ ಬಂದ ದೇವಿ 9 ಜನ ಸಿಎಂ ಸ್ಥಾನದ ಆಕಾಂಕ್ಷಿ ಎಂದು ಹೇಳಿದ್ದಳು. ಆದರೆ, ಕೊನೆಗೆ ಇಬ್ಬರಿಗೆ ಸಿಎಂ ಸ್ಥಾನ ನೀಡಲು ಪ್ರೇರಣೆ ನೀಡಿದ್ದಳು.
ಆಗ ನಾನು ಡಿಕೆ ಶಿವಕುಮಾರ್ ಅವರಿಗೆಗೆ ಹೂವಿನ ಹಾರ ಹಾಕು ಅಂದೆ. ಆದರೆ, ಸಿದ್ದರಾಮಯ್ಯ ಅವರಿಗೆ ಹಾರ ಹಾಕಿದ್ದಳು. 50 – 50 ಅಧಿಕಾರ ಎಂದು ಸೂಚನೆ ನೀಡಿದ್ದಳು. ಮೊದಲನೇ ಅವಧಿಗೆ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಎರಡನೇ ಅವಧಿಗೆ ಡಿಕೆ ಶಿವಕುಮಾರ್ ಸಿಎಂ ಆಗುವ ಕಾಲ ಬಂದಿದೆ ” ಎಂದು ಹೇಳಿದ್ದಾರೆ.