ಹುಬ್ಬಳ್ಳಿ:- ಹೃದಯಾಘಾತಕ್ಕೆ ಕೋವಿಡ್ ಲಸಿಕೆ ಕಾರಣ ಎನ್ನುವುದು ಸಿಎಂ ಬೇಜವಾಬ್ದಾರಿ ತೋರಿಸತ್ತೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹೃದಯಾಘಾತ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸದೆ, “ಕೋವಿಡ್ ಲಸಿಕೆಯೇ ಇದಕ್ಕೆ ಕಾರಣ” ಎಂಬ ಸಿಎಂ ಹೇಳಿಕೆ ಬೇಜವಾಬ್ದಾರಿಯ ಪರಮಾವಧಿ. ಇದಕ್ಕಾಗಿ ಅವರು ದೇಶದ ಮತ್ತು ವಿಜ್ಞಾನಿಗಳ ಸಮೂಹದ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.
ಸಿಎಂ, ಯಾವುದನ್ನೂ ಸರಿಯಾಗಿ ಪರಿಶೀಲಿಸದೆ, ತಜ್ಞರ ವರದಿ ನೋಡದೆ ಕೋವಿಡ್ ಲಸಿಕೆಯನ್ನೇ ಅನುಮಾನಿಸುವುದು, ಲಸಿಕೆ ಕಂಡು ಹಿಡಿದ ಸಂಶೋಧಕರು ಮತ್ತು ವಿಜ್ಞಾನಿಗಳನ್ನು ಅಪಮಾನಿಸುವುದನ್ನು ತೀವ್ರವಾಗಿ ಖಂಡಿಸುತ್ತೇನೆ. ಸಿದ್ದರಾಮಯ್ಯ ಅವರು ಕೂಡಲೇ ಟ್ವೀಟ್ ಮಾಡಿ ದೇಶದ ವಿಜ್ಞಾನಿಗಳ ಸಮುದಾಯದ ಕ್ಷಮೆ ಕೇಳಬೇಕು ಎಂದರು.
ಸಿದ್ದರಾಮಯ್ಯ ಅವರಿಗೀಗ 74 ವರ್ಷ. ಅವರೂ ಕೋವಿಡ್ ಲಸಿಕೆ ತೆಗೆದುಕೊಂಡಿದ್ದಾರೆ ಅಲ್ಲವೇ? ಅಥವಾ ವಿದೇಶಿ ಲಸಿಕೆ ತೆಗೆದುಕೊಂಡಿದ್ದಾರಾ? ಎಂದು ಮಾರ್ಮಿಕವಾಗಿ ಪ್ರಶ್ನಿಸಿದ ಸಚಿವರು, ರಾಜ್ಯ ಸರ್ಕಾರವೇ ನೇಮಿಸಿದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಕೆ.ಎಸ್.ರವೀಂದ್ರನಾಥ್ ನೇತೃತ್ವದ 10 ತಜ್ಞರ ಸಮಿತಿ ಅಧ್ಯಯನ ನಡೆಸಿ” ಕೋವಿಡ್ ಲಸಿಕೆಗೂ ಹೃದಯಾಘಾತಕ್ಕೂ ಸಂಬಂಧವಿಲ್ಲ” ಎಂದು ಸ್ಪಷ್ಟ ವರದಿ ಸಲ್ಲಿಸಿದೆ ಇದಕ್ಕೇನು ಹೇಳುತ್ತಾರೆ ಸಿಎಂ? ಎಂದು ಪ್ರಶ್ನಿಸಿದರು.