ಬೆಂಗಳೂರು: ಸಾರಿಗೆ ನೌಕರರ ಜೊತೆಗೆ ಸಿಎಂ ಸಿದ್ದರಾಮಯ್ಯ ನಡೆಸಿದ ಸಂಧಾನ ಸಭೆ ವಿಫಲಗೊಂಡಿದ್ದು, ನಾಳೆ ಬಿಎಂಟಿಸಿ, ಕೆಎಸ್ಆರ್ಟಿಸಿ, ಎನ್ಡಬ್ಲೂಕೆಆರ್ಟಿಸಿ, ಕೆಕೆಆರ್ಟಿಸಿ ಬಸ್ಗಳು ರಸ್ತೆಗೆ ಇಳಿಯುವುದಿಲ್ಲ ಎಂದು ತಿಳಿದು ಬಂದಿದೆ. 1.15 ಲಕ್ಷ ಸರ್ಕಾರಿ ಸಾರಿಗೆ ನೌಕರ ಬಂದ್ ನಲ್ಲಿ ಭಾಗಿಯಾಗುವ ಸಾಧ್ಯತೆಯಿದೆ.
ಹೀಗಾಗಿ ಇಂದು ರಾತ್ರಿಯಿಂದಲೇ ಬಸ್ ಸಂಚಾರ ಸ್ಥಗಿತವಾಗುವ ಸಾಧ್ಯತೆಯಿದೆ. ವೇತನ ಪರಿಷ್ಕರಣೆ ಸೇರಿದಂತೆ ಹಲವು ಬೇಡಿಕೆಗಳನ್ನ ಮುಂದಿಟ್ಟುಕೊಂಡು ಆಗಸ್ಟ್ 5 ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಸಾರಿಗೆ ನೌಕರರು ಮುಂದಾಗಿದ್ದಾರೆ.
1800 ಕೋಟಿ ಹಿಂಬಾಕಿ, ಕೋಟ್ಯಾಂತರ ರುಪಾಯಿ ಪಿಎಫ್ ಬಾಕಿ,ವೇತನ ಹೆಚ್ಚಳ ಸೇರಿದಂತೆ ಹತ್ತಾರು ಬೇಡಿಕೆಗಳನ್ನು ಸರ್ಕಾರದ ಮುಂದೆ ಇಡಲಾಗಿದೆ. ಆದರೆ ಹಿಂಬಾಕಿ ಕೊಡಲು ಸರ್ಕಾರ ಒಪ್ಪದಿದ್ದ ಕಾರಣ, ಸಭೆಯಲ್ಲಿ ಒಮ್ಮತದ ನಿರ್ಧಾರಕ್ಕೆ ಬರಲಾಗಿಲ್ಲ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಹಾಗೂ ಒಕ್ಕೂಟದೊಂದಿದೆ ವಿಧಾನದೌಧದ ಸಮಿತಿ ಕೊಠಡಿಯಲ್ಲಿ ಸುದೀರ್ಘ ಸಭೆ ನಡೆಸಿದರು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಹಾಗೂ ಇಲಾಖಾ ಅಧಿಕಾರಿಗಳು ಮತ್ತು ಕಾರ್ಮಿಕ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.