ವಿಜಯನಗರ: ಜಿರಳೆ ಅಂದ್ರೆ ಯಾರಿಗೆ ತಾನೇ ಭಯವಿಲ್ಲ ಹೇಳಿ. ಹುಲಿಗೆ ಹೆದರುತ್ತಿವೋ ಗೊತ್ತಿಲ್ಲ, ಆದ್ರೆ ಜಿರಳೆ ಅಂದ್ರೆ ಸ್ವಲ್ಪ ಕೈ-ಕಾಲು ಶೇಕ್ ಆಗೋದಂತು ನಿಜ. ಇಂತಹ ಜಿರಳೆಗಳು ಮನೆಯಷ್ಟೇ ಅಲ್ಲದೇ ಬಸ್ ಗಳಲ್ಲೂ ವಾಸ್ತವ್ಯ ಹೂಡುತ್ತಿವೆ. ಅರೆ ಏನಪ್ಪಾ ಬಸ್ ನಲ್ಲಿ ಜಿರಳೆ ಅಂತೀರಾ? ಹೌದು, ಇದು ದುಬಾರಿ ದುಡ್ಡು ಕೊಟ್ಟು ಹೋಗುವ ಐಷಾರಾಮಿ ಎಸಿ ಬಸ್ ಗಳ ಕಥೆ… ಅಲ್ಲ ಸ್ವಾಮಿ ವ್ಯಥೆ!
ಎಸ್, ಉತ್ತರ ಕರ್ನಾಟಕದಿಂದ ದಕ್ಷಿಣ ಕರ್ನಾಟಕ ಕೊಂಚ ದೂರಾನೆ ಇದೆ. ಉದಾಹರಣೆಗೆ ಬೆಳಗಾವಿಯಿಂದ ರಾಜಧಾನಿ ಬೆಂಗಳೂರಿಗೆ ಬರಬೇಕಾದರೆ ಸಮಯ 7 ರಿಂದ 8 ಗಂಟೆ ಬೇಕೆ ಬೇಕು. ಇಂತಹ ಸಮಯದಲ್ಲಿ ಸ್ವಲ್ಪ ರಿಚ್ ಜನರು ಐಷಾರಾಮಿ ಎಸಿ ಬಸ್ ಗಳ ಮೊರೆ ಹೋಗ್ತಾರೆ. ರಿಚ್ ಜನರಷ್ಟೇ ಅಲ್ಲದೇ ರಾತ್ರಿಯ ಸುಖಮಯ ಸಂಚಾರಕ್ಕಾಗಿ ಸಾಮಾನ್ಯ ಜನರು ಕೂಡ ಐಷಾರಾಮಿ ಎಸಿ ಗಳ ಮೊರೆ ಹೋಗುತ್ತೀರೋದು ನಿಜ. ಆದ್ರೆ ನಿದ್ರೆ ಸುಖವಾಗಿರಲಿ ಅಂತ ಅಷ್ಟು ದುಡ್ಡು ಕೊಟ್ಟು ಹೋದ್ರೂ ಜನರಿಗೆ ನೆಮ್ಮದಿಯ ನಿದ್ದೆ ಇಲ್ಲದಂತಾಗಿದೆ ಮರ್ರೆ.. ಯಾಕೆ ಅಂತೀರಾ.. ಈ ಸ್ಟೋರಿ ಪೂರ್ತಿ ಓದಿ.
ಹೌದು, ಸಾಮಾನ್ಯ ಸಾರಿಗೆ ಬಸ್‌ಗಳು ಬೆಂಗಳೂರಿನಿಂದ ಬೇರೆ ಬೇರೆ ಊರುಗಳಿಗೆ ಸಾಕಷ್ಟಿವೆ. ಕಲ್ಯಾಣ ಕರ್ನಾಟಕದ ಜಿಲ್ಲೆಗಳು ರಾಜಧಾನಿಯಿಂದ ದೂರ ಇರುವುದರಿಂದ ಕೆಎಸ್ಆರ್‌ಟಿಸಿಯ ಐಷಾರಾಮಿ ಬಸ್‌ಗಳಿವೆ. ಪ್ರಯಾಣ ದರವೂ ಅಷ್ಟೇ ಐಷಾರಾಮಿಯಾಗಿವೆ. ದೂರದ ಪ್ರಯಾಣ ಆಗಿರುವುದರಿಂದ ಸಾಮಾನ್ಯ ಬಸ್‌ಗಳಲ್ಲಿ ಪ್ರಯಾಣಿಸುವುದು ಹೈರಾಣು ಎನಿಸುವುದರಿಂದ ಸ್ಥಿತಿವಂತರು ಐಷಾರಾಮಿ ಬಸ್ ಪ್ರಯಾಣಕ್ಕೆ ಆದ್ಯತೆ ನೀಡುವುದು ಸಹಜ. ಆದರೆ ಜಿರಳೆಗಳಿಗೆ ಸ್ಥಿತಿವಂತರೂ ಅಷ್ಟೇ. ಜನಸಾಮಾನ್ಯರೂ ಅಷ್ಟೇ. ಹೌದ್ರಿ.. ಇಲ್ಲೋರ್ವ ವ್ಯಕ್ತಿ ಸುಖಮಯ ನಿದ್ದೆ ಕೊಡುವ ಎಸಿ ಬಸ್ ನಲ್ಲಿ ರಾತ್ರಿಯಿಡೀ ಜಾಗರಣೆ ಮಾಡಿದ ಘಟನೆ ಬೆಂಗಳೂರಿನಿಂದ ಸಿಂಧನೂರಿಗೆ ತೆರಳುವ ಕಲ್ಯಾಣ ರಥ ಎಸಿ ಸ್ಲೀಪರ್ ಬಸ್‌ನಲ್ಲಿ ಜರುಗಿದೆ.
ಆಗಸ್ಟ್ 1 ರಂದು ರಾತ್ರಿ 9-48ಕ್ಕೆ ಬೆಂಗಳೂರಿನಿಂದ ಸಿಂಧನೂರಿಗೆ ತೆರಳುವ ಕಲ್ಯಾಣ ರಥ ಎಸಿ ಸ್ಲೀಪರ್ ಬಸ್‌ನ ಆಸನ ಸಂಖ್ಯೆ 01ರ ಪ್ರಯಾಣಿಕರೊಬ್ಬರು ಜಿರಳೆ ಕಾಟದಿಂದ ರಾತ್ರಿಯಿಡೀ ಜಾಗರಣೆ ಮಾಡಿದ್ದಾರೆ. ಬಸ್ ನಲ್ಲಿ ಪ್ರಯಾಣ ಆರಂಭವಾದ ಬಳಿಕ ಕಣ್ತುಂಬ ನಿದ್ದೆ ಮಾಡಿದರಾಯಿತು ಎಂದು ಲೈಟ್ ಆಫ್ ಮಾಡಿ ಮಲಗಿದ ಐದು ನಿಮಿಷದಲ್ಲೇ ಮೈ ಮೇಲೆ ಏನೋ ಹರಿದಡಿದಂತಾಗಿದೆ. ಹಾಗಾಗಿ ಲೈಟ್ ಆನ್ ಮಾಡಿ ನೋಡಿದಾಗ ಜಿರಳೆಯೊಂದು ಓಡಾಡುತ್ತಿದೆ. ಕೂಡಲೇ ಈ ವಿಷಯವನ್ನು ನಿರ್ವಾಹಕ ವೀರೇಶ ಅವರ ಬಳಿ ಹೇಳಿಕೊಂಡಾಗ, ‘ನಾವೇನ್ ಮಾಡಕಾಗುತ್ತೆ? ದೂರು ಕೊಡಿ.’ ಎಂದು ವಿನಮ್ರವಾಗಿ ಕೋರಿದರು ಎಂದು ಪ್ರಯಾಣಿಕರೊಬ್ಬರು ವಿಜಯಸಾಕ್ಷಿಗೆ ತಿಳಿಸಿದರು.
ಬಸ್ ಐಷಾರಾಮಿಯಾಗಿದ್ದರೆ ಮಾತ್ರ ಸಾಲದು. ಸಹಸ್ರಾರು ರೂಪಾಯಿ ನೀಡಿ ಟಿಕೆಟ್ ಖರೀದಿಸುವ ಪ್ರಯಾಣಿಕ ಆರಾಮಾಗಿ ನಿದ್ದೆ ಮಾಡುವ ವಾತಾವರಣ, ಸ್ವಚ್ಛತೆ ಬಸ್‌ನಲ್ಲಿ ಇರಬೇಕು ಎಂಬುದು ಪ್ರಯಾಣಿಕರ ಆಗ್ರಹ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕು.
ಬ್ಯೂರೋ ರಿಪೋರ್ಟ್:
ವಿಜಯಸಾಕ್ಷಿ