ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಲಕ್ಷ್ಮೇಶ್ವರ ಸೇರಿ ತಾಲೂಕಿನ ಕೆಲ ಗ್ರಾಮಗಳಲ್ಲಿ ಸೋಮವಾರ ಸಂಜೆ ಗುಡುಗು-ಸಿಡಿಲಬ್ಬರದೊಂದಿಗೆ ಸಣ್ಣ ಮಳೆ ಸುರಿದು ಕಾದ ಭೂಮಿಯಿಂದ ಸೂಸುತ್ತಿದ್ದ ಬಿಸಿ ಗಾಳಿಗೆ ತಾತ್ಕಾಲಿಕ ಉಪಶಮನ ನೀಡಿದಂತಾಗಿದೆ.
ಜೋರಾದ ಗಾಳಿ, ಗುಡುಗಿ-ಸಿಡಿಲಬ್ಬರ ಜನರನ್ನು ಬೆಚ್ಚಿ ಬೀಳಿಸಿತ್ತು. ಪಟ್ಟಣದ ಸೋಮೇಶ್ವರ ದೇವಸ್ಥಾನದ ತೇರಿನ ಮನೆ ಹತ್ತಿರದ ಇಟಗಿ ಬಸವೇಶ್ವರ ದೇವಸ್ಥಾನ ಮುಂಭಾಗದ ತೆಂಗಿನಮರಕ್ಕೆ ಸಿಡಿಲು ಬಿದ್ದು ಬೆಂಕಿ ಹೊತ್ತಿ ಉರಿಯಿತು. ಮರದ ಕೆಳಗೆ ಮೇವಿನ ಬಣವೆ ಇದ್ದುದರಿಂದ ರೈತರು ಆತಂಕ್ಕೀಡಾಗಿದ್ದರು. ಸುದ್ದಿ ತಿಳಿಯುತ್ತಿದ್ದಂತೆಯೇ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಹೆಚ್ಚಿನ ಹಾನಿ ತಪ್ಪಿಸಿದರು. ಅಲ್ಲಲ್ಲಿ ಮರದ ಕೊಂಬೆಗಳು ನೆಲಕ್ಕುರುಳಿದವು.
ಪಟ್ಟಣದ ಮಾರುಕಟ್ಟೆಯಲ್ಲಿ ಬೀದಿ ಬದಿ ವ್ಯಾಪಾರಸ್ಥರು, ಎಪಿಎಂಸಿಯಲ್ಲಿ ಮಹಸೀಲು ರಕ್ಷಿಸಲು ರೈತರು, ವ್ಯಾಪಾರಸ್ಥರು ಪರದಾಡಿದರು. ಈ ಸಣ್ಣ ಮಳೆ ಕಾದ ಹಂಚಿನ ಮೇಲೆ ನೀರು ಸುರಿದಂತಾಗಿ ಮುಂದಿನ ದಿನಗಳಲ್ಲಿ ವಾತಾವರಣದಲ್ಲಿ ಉಷ್ಣತೆ ಹೆಚ್ಚಿಸಲಿದ್ದು, ಜೋರಾದ ಮಳೆಯಾದರಷ್ಟೇ ಅನಕೂಲವಾಗುತ್ತದೆ ಎಂಬ ಮಾತುಗಳು ಕೇಳಿ ಬಂದವು.