ಬೆಂಗಳೂರು: ಕಳೆದ ಹಲವು ದಿನಗಳಿಂದ ರಾಜ್ಯದಾದ್ಯಂತ ಶೀತದಲೆ ತೀವ್ರವಾಗಿ ಕಾಡುತ್ತಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಚಳಿಯಿಂದ ಜನಜೀವನ ಅಸ್ತವ್ಯಸ್ತವಾಗಿದೆ.
ಉತ್ತರ ಕರ್ನಾಟಕ ಭಾಗದಲ್ಲೂ ಚಳಿಯ ಪ್ರಭಾವ ಹೆಚ್ಚಾಗಿದ್ದು, ಇಂದು ಕಲಬುರಗಿ ಹಾಗೂ ಬೀದರ್ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಭಾನುವಾರ ವಿಜಯಪುರದಲ್ಲಿ 6.9 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದ್ದು, ಇದು ಕಳೆದ 20 ವರ್ಷಗಳಲ್ಲಿ ಮೂರನೇ ಅತಿ ಕಡಿಮೆ ತಾಪಮಾನವಾಗಿದೆ. ಆದರೆ ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಇಂದು ಉತ್ತರ ಕರ್ನಾಟಕದಲ್ಲಿ ಚಳಿಯ ಪ್ರಮಾಣ ಸ್ವಲ್ಪ ಮಟ್ಟಿಗೆ ಇಳಿಕೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ನಿನ್ನೆ ಐದು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಇದ್ದರೆ, ಇಂದು ಕಲಬುರಗಿ ಹಾಗೂ ಬೀದರ್‌ಗೆ ಮಾತ್ರ ಎಚ್ಚರಿಕೆ ಮುಂದುವರಿದಿದೆ. ರಾಜಧಾನಿ ಬೆಂಗಳೂರಿನಲ್ಲಿ ವಾತಾವರಣದಲ್ಲಿ ತೀವ್ರ ಏರುಪೇರು ಕಂಡುಬರುತ್ತಿದ್ದು, ಚಳಿ ಹಾಗೂ ಮಂಜಿನ ವಾತಾವರಣ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಚ್ಚರಿಕೆಯಿಂದ ಇರುವಂತೆ ಹವಾಮಾನ ಇಲಾಖೆ ಸಲಹೆ ನೀಡಿದೆ.
ಬೆಚ್ಚನೆಯ ಉಡುಪು ಧರಿಸುವುದು ಹಾಗೂ ಸಮತೋಲನ ಆಹಾರ ಸೇವನೆಗೆ ಒತ್ತು ನೀಡುವಂತೆ ಸೂಚಿಸಲಾಗಿದೆ. ಇಂದು ಬೆಂಗಳೂರಿನ ಕನಿಷ್ಠ ತಾಪಮಾನ 15°C ಹಾಗೂ ಗರಿಷ್ಠ 27°C ಇರಲಿದೆ ಎಂದು ತಿಳಿಸಲಾಗಿದೆ. ತೀವ್ರ ಚಳಿಯ ಪರಿಣಾಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿರುವುದರಿಂದ, ಬಿಸಿ ಆಹಾರ ಸೇವನೆ, ಬೆಚ್ಚಗಿನ ಹೊದಿಕೆ ಬಳಕೆ ಮಾಡಬೇಕೆಂದು ವೈದ್ಯರು ಸಲಹೆ ನೀಡಿದ್ದಾರೆ. ಇನ್ನು ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡದಲ್ಲಿ ಒಣಹವೆಯ ವಾತಾವರಣ ಇರಲಿದೆ. ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ನಗರ–ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಚಾಮರಾಜನಗರ, ಮೈಸೂರು, ತುಮಕೂರು ಹಾಗೂ ವಿಜಯನಗರ ಜಿಲ್ಲೆಗಳಲ್ಲೂ ಒಣಹವೆ ಮುಂದುವರಿಯಲಿದೆ.
ಉತ್ತರ ಒಳನಾಡಿನ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ರಾಯಚೂರು, ಯಾದಗಿರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿಯೂ ಇಂದೂ ಒಣ ಹವೆಯ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.



