ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ತಾಲೂಕಿನ ಬಾಲೆಹೊಸೂರ ಗ್ರಾಮದ ಹತ್ತಿರ ರಸ್ತೆಗೆ ಅಡ್ಡಲಾಗಿ ನಿರ್ಮಿಸಿದ ಕಿರು ಸೇತುವೆ ಮಳೆಯಿಂದಾಗಿ ಕುಸಿದಿದ್ದು, ಆ ಮಾರ್ಗದ ಬಸ್ ಸಂಚಾರ ಸ್ಥಗಿತಗೊಂಡು ಜನರು ಸಂಚಾರಕ್ಕಾಗಿ ಪರದಾಡುವಂತಾಗಿದೆ.
ಕಳೆದ 15/20 ದಿನಗಳ ಹಿಂದೆಯೇ ಸೂರಣಗಿಯಿಂದ ಬಾಲೆಹೊಸೂರಿಗೆ ಸಂಪರ್ಕ ಕಲ್ಪಿಸುವ ಮಾರ್ಗ ಮಧ್ಯದ ಸೇತುವೆಯು ಕುಸಿದು ಅಪಾಯಕ್ಕೆ ಆಹ್ವಾನ ನೀಡುವಂತಾಗಿತ್ತು. ಈ ಬಗ್ಗೆ ಪಿಡಬ್ಲೂಡಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ರಸ್ತೆಗೆ ಅಡ್ಡಲಾಗಿ ಅಳವಡಿಸಿರುವ ಕಿರು ಸೇತುವೆ ಸಂಪೂರ್ಣ ಕುಸಿದಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ಬೈಕ್ ಹೊರತುಪಡಿಸಿ 4 ಚಕ್ರದ ವಾಹನ, ಚಕ್ಕಡಿ ಹಾದು ಹೋಗದಂತಾಗಿದ್ದು ಜನತೆ, ರೈತರು ಪರದಾಡುವಂತಾಗಿದೆ.
ಬಾಲೆಹೊಸೂರ ಸೇರಿ ಈ ಭಾಗದ ಹಾಲಗಿ, ಮರೂಳ, ನೆಗಳೂರ, ಕೆರೆಕೊಪ್ಪ, ಮಾದಾಪುರ, ಮರಡೂರ ಸೇರಿ ಹಲವು ಗ್ರಾಮಗಳ ಜನರು ನಿತ್ಯ ವ್ಯಾಪಾರ-ವಹಿವಾಟು, ಶಿಕ್ಷಣ ಅನೇಕ ಕಾರಣಗಳಿಗಾಗಿ ಲಕ್ಷ್ಮೇಶ್ವರಕ್ಕೆ ಬರುತ್ತಾರೆ. ಆದರೆ ಲಕ್ಷ್ಮೇಶ್ವರಕ್ಕೆ ಬರುವ ಬಸ್ ಸಂಚಾರ ಸ್ಥಗಿತಗೊಂಡು, ಈ ಭಾಗದ ಜನರು ಅನಿವಾರ್ಯವಾಗಿ ಸುತ್ತುವರಿದು ಸಂಚರಿಸುವಂತಾಗಿದೆ. ನಿತ್ಯ ಶಾಲಾ-ಕಾಲೇಜಿಗೆ ಹೋಗುವ ಮಕ್ಕಳು, ಇತರೆ ಕಾರಣಗಳಿಗೆ ಊರಿಗೆ ಹೋದವರನ್ನು ಸೂರಣಗಿಯಿಂದ ಬೈಕ್ ಮೂಲಕ ಕರೆದುಕೊಂಡು ಹೋಗಬೇಕಾಗಿದೆ ಎಂದು ತಾವು ಅನುಭಿಸುತ್ತಿರುವ ಸಮಸ್ಯೆಯನ್ನು ಗ್ರಾಮದ ಸಿ.ಎಫ್. ಹಿರೇಮಠ ಪತ್ರಿಕೆಯೊಂದಿಗೆ ಹಂಚಿಕೊಂಡರು.
ತಾಲೂಕಿನ ಬಡ್ನಿ ಹತ್ತಿರದ ಹಳ್ಳದ ಸೇತುವೆಯ ಪರಿಸ್ಥಿತಿಯೂ ಇದೇ ಆಗಿದ್ದು, ಜಿಲ್ಲಾಧಿಕಾರಿಗಳ ಸೂಚನೆಯ ಹಿನ್ನೆಲೆಯಲ್ಲಿ ಲಕ್ಷಾಂತರ ರೂ ಖರ್ಚು ಮಾಡಿ ತಾತ್ಕಾಲಿಕ ದುರಸ್ಥಿ ಮಾಡಲಾಗಿದ್ದರೂ ಅಪಾಯ ತಪ್ಪದಂತಾಗಿದೆ. ಶಾಶ್ವತ ಪರಿಹಾರಕ್ಕೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಈ ಮಾರ್ಗದ ರಸ್ತೆ ಸಂಪೂರ್ಣ ಹಾಳಾಗಿ ವರ್ಷಗಳೇ ಕಳೆದರೂ ದುರಸ್ಥಿ ಕಾಣದ್ದರಿಂದ ಈ ಮಾರ್ಗದ ಪ್ರಯಾಣದಿಂದ ಜನರು ನರಕ ಯಾತನೆ ಅನುಭವಿಸುತ್ತಿದ್ದಾರೆ. ಬಸ್ ಸಂಪರ್ಕ ಕಡಿತಗೊಳಿಸಿದ್ದರಿಂದ ನಿತ್ಯ ರೈತರು ಬೆಳೆದ ತರಕಾರಿ, ಹೂವು, ಹೈನುಗಾರಿಕೆ ಪದಾರ್ಥಗಳನ್ನು ಸಾಗಿಸಲು ಕಷ್ಟವಾಗುತ್ತಿದೆ. ಶಾಲಾ-ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳ ಶಿಕ್ಷಣ, ವೈದ್ಯಕೀಯ ಚಿಕಿತ್ಸೆಗೆ ಹೋಗಲು ಅಡ್ಡಿಯಾಗುತ್ತದೆ. ಪಿಡಬ್ಲೂಡಿ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಕಿರು ಸೇತುವೆ, ರಸ್ತೆ ದುರಸ್ಥಿಗೊಳಿಸಿ ಜನರ ಅನುಭವಿಸುತ್ತಿರುವ ಪರದಾಟ ತಪ್ಪಿಸಬೇಕು ಎಂದು ಗ್ರಾಮಾಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಬಸವರೆಡ್ಡಿ ಹನಮರೆಡ್ಡಿ ಆಗ್ರಹಿಸಿದ್ದಾರೆ.
ಈ ಕುರಿತು ಪಿಡಬ್ಲೂಡಿ ಇಲಾಖೆ ಎಇಇ ಅವರನ್ನು ಸಂಪರ್ಕಿಸಲಾಗಿ, ತಾಲೂಕಿನಲ್ಲಿ ಹಲವು ಕಡೆ ಮಳೆಯಿಂದಾಗಿ ಕಿರು ಸೇತುವೆಗಳು ಕುಸಿದಿದ್ದು ಅನುದಾನದ ಕೊರತೆಯಿಂದ ತಾತ್ಕಾಲಿಕವಾಗಿ ದುರಸ್ಥಿ ಮಾಡಲಾಗುತ್ತಿದೆ. ಶಾಶ್ವತ ಪರಿಹಾರಕ್ಕಾಗಿ ಕ್ರಿಯಾಯೋಜನೆ ಸಿದ್ಧಪಡಿಸಿ ಇಲಾಖೆಗೆ ಕಳುಹಿಸಲಾಗಿದೆ. ಅನುದಾನ ಮಂಜೂರಾದ ಬಳಿಕ ಕಾಮಗಾರಿ ಕೈಗೊಳ್ಳಲಾಗುವುದು ಎಂದಿದ್ದಾರೆ.
ಈ ಕುರಿತು ಲಕ್ಷ್ಮೇಶ್ವರ ಸಾರಿಗೆ ಘಟಕದ ವ್ಯವಸ್ಥಾಪಕರಾದ ಸವಿತಾ ಆದಿ ಅವರನ್ನು ಸಂಪರ್ಕಿಸಲಾಗಿ, ತಾಲೂಕಿನ ಬಹುತೇಕ ರಸ್ತೆಗಳು ಹಾಳಾಗಿವೆ ಮತ್ತು ಮಾರ್ಗದ ಕಿರು ಸೇತುವೆಗಳ ಮೇಲಿನ ಸಂಚಾರ ಅಪಾಯ ತಂದೊಡ್ಡಲಿವೆ. ಸಮಸ್ಯೆ ಇರುವ ಬಾಲೆಹೊಸೂರ ಮತ್ತು ಬಡ್ನಿ ಮಾರ್ಗದ ಬಸ್ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ದುರಸ್ಥಿಯಾಗುತ್ತಿದ್ದಂತೆಯೇ ಸಂಚಾರ ಪುನಃ ಪ್ರಾರಂಭಿಸಲಾಗುವುದು ಎಂದು ತಿಳಿಸಿದ್ದಾರೆ.