ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಸಮೀಪದ ಹೂವಿನಶಿಗ್ಲಿ ಮಠದಲ್ಲಿ ಜ.13ರಿಂದ 15ನವರೆಗೆ ನಡೆಯುವ ಖಡಕ್‌ರೊಟ್ಟಿ-ಕರಿಂಡಿ ಜಾತ್ರಾಮಹೋತ್ಸವಕ್ಕೆ ಶುಕ್ರವಾರ ಶ್ರೀಮಠದ ಶ್ರೀ ಚನ್ನವೀರ ಮಹಾಸ್ವಾಮಿಗಳ ನೇತೃತ್ವದಲ್ಲಿ ಗ್ರಾಮದಲ್ಲಿ ಎತ್ತಿನ ಬಂಡಿಗಳ ಮೂಲಕ ರೊಟ್ಟಿ, ಕಡಬು ಇತರೇ ಆಹಾರ-ಪದಾರ್ಥ ಸಂಗ್ರಹಿಸುವ ಕಾರ್ಯ ಅದ್ದೂರಿಯಾಗಿ ನೆರವೇರಿತು.
ಕಳೆದ 45 ವರ್ಷಗಳಿಂದ ನಡೆಯುತ್ತಿರುವ ಜಾತ್ರಾಮಹೋತ್ಸವಕ್ಕೆ ಜಾತ್ರೆಯ ಮುನ್ನಾದಿನ ಗ್ರಾಮದಲ್ಲಿನ ಎಲ್ಲ ಜಾತಿ, ಜನಾಂಗದವರೂ ರೊಟ್ಟಿ, ದವಸ, ಧನಧಾನ್ಯದ ಸೇವೆಯನ್ನು ಕೈಲಾದ ಮಟ್ಟಿಗೆ ಮಠಕ್ಕೆ ಬಂದು ಸಲ್ಲಿಸುತ್ತಾರೆ. ಈ ವರ್ಷ ಶ್ರೀಗಳೇ ಎತ್ತಿನ ಬಂಡಿ, ವಾದ್ಯಮೇಳದೊಂದಿಗೆ ಗ್ರಾಮದಲ್ಲಿ ಸಂಚರಿಸಿ ನೇರವಾಗಿ ಭಕ್ತರಿಂದಲೇ ರೊಟ್ಟಿ, ದವಸಧಾನ್ಯ ಸಂಗ್ರಹಿಸುವ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು.
ಶ್ರೀಗಳೇ ಭಕ್ತರ ಮನೆ ಬಾಗಿಲಿನತ್ತ ಬರುತ್ತಾರೆಂಬ ಸಂಭ್ರಮದಿಂದ ಗ್ರಾಮ ಪಂಚಾಯಿತಿಯವರು ಊರೆಲ್ಲ ಸ್ವಚ್ಛಗೊಳಿಸಿದ್ದರು. ಪ್ರತಿ ಓಣಿಯಲ್ಲೂ ಭಕ್ತರು ತಮ್ಮ ಮನೆಯ ಮುಂದೆ ರಂಗೋಲಿ ಹಾಕಿದ್ದರು. ಜಾತ್ರೆ ಪ್ರಸಾದ ಸೇವೆಗಾಗಿ ಮೊದಲೇ ಸಿದ್ಧಪಡಿಸಿದ್ದ ನೂರಾರು ರೊಟ್ಟಿಗಳ ಬುಟ್ಟಿಗೆ ಹೊಸ ಬಟ್ಟೆ ಕಟ್ಟಿ ಪೂಜೆ ಮಾಡಿ ತಲೆಯ ಮೇಲೆ ಹೊತ್ತು ಕಾಯುತ್ತಿದ್ದರು. ಶೃದ್ಧಾ ಭಕ್ತಿಯಿಂದ, ಸಂತೋಷದಿಂದ ರೊಟ್ಟಿಬುಟ್ಟಿ ಹತ್ತು ತಂದ ತಾಯಂದಿರ ತಲೆಯ ಮೇಲಿನ ರೊಟ್ಟಿಬುಟ್ಟಿಯನ್ನು ಸ್ಪರ್ಶಿಸಿ ಆಶೀರ್ವಸಿದ ಬಳಿಕ ಸಾಲುಗಟ್ಟಿ ಬರುತ್ತಿದ್ದ ಎತ್ತಿನ ಚಕ್ಕಡಿಯಲ್ಲಿ ರೊಟ್ಟಿ ಸಂಗ್ರಹಿಸಲಾಗುತ್ತಿತ್ತು. ಹತ್ತಾರು ಬಂಡಿಗಳು ಪೂರ್ಣ ತುಂಬಿದ್ದರಿಂದ ನೂರಾರು ಮಹಿಳೆಯರು ರೊಟ್ಟಿ ಬುಟ್ಟಿ ಹೊತ್ತು ಮೆರವಣಿಗೆ ಮೂಲಕ ಮಠದವರೆಗೂ ತಲುಪಿಸಿ ಸಂತೃಪ್ತ ಭಾವ ವ್ಯಕ್ತಪಡಿಸಿದರು.
ಮೆರವಣಿಗೆ ವೇಳೆ ಹಿಂದೂ-ಮುಸ್ಲಿಂ ಸಮಾಜದ ಎಲ್ಲ ಹಿರಿಯರು, ಮಹಿಳೆಯರು, ಯುವಕರು, ಮಕ್ಕಳು ಶ್ರೀಮಠದ ಭಕ್ತ ಮಂಡಳಿಯವರು ಪಾಲ್ಗೊಂಡಿದ್ದರು. ಬಳಿಕ ರತೋತ್ಸವಕ್ಕೆ ಕಳಸಾರೋಹಣ ನೆರವೇರಿಸಲಾಯಿತು.
ಹೂವಿನಶಿಗ್ಲಿ ಮಠದಲ್ಲಿ ಮಕರ ಸಂಕ್ರಾಂತಿ ಪುಣ್ಯಕಾಲದಲ್ಲಿ ಜರುಗುವ ಜಾತ್ರಾಮಹೋತ್ಸವ ನಿಮಿತ್ತ ಮಠಾದೀಶರು, ಮಹಾತ್ಮರನ್ನು ಕರೆಯಿಸಿ ಅವರ ದರ್ಶನಾಶೀರ್ವಾದ ಮಾಡಿಸುವ ಮತ್ತು ಖಟಕ್-ರೊಟ್ಟಿ ಕರಿಂಡಿ, ಕಡಬು ಪ್ರಸಾದ ಮಾಡುವ ಸಂಪ್ರದಾಯವನ್ನು ಶ್ರೀಮಠದ ಲಿಂ.ನಿರಂಜನ ಮಹಾಸ್ವಾಮಿಗಳು ಹಾಕಿಕೊಟ್ಟಿದ್ದಾರೆ. ಭಕ್ತರು ಮಠಕ್ಕೆ ತಂದು ಕೊಡುತ್ತಿದ್ದರು. ಈ ವರ್ಷ ನಾವೇ ಭಕ್ತರ ಮನೆಯತ್ತ ಹೋಗಿ ಬಂಡಿ ಮೂಲಕ ರೊಟ್ಟಿ ಸಂಗ್ರಹಿಸುವ ಕಾರ್ಯ ಮಾಡಿದ್ದೇವೆ. ಜಾತ್ರೆಗೆ ಮಹಾರಾಷ್ಟ್ರ, ಬೀದರ, ತೇಲಂಗಾಣ ಗಡಿಭಾಗ ಶಾಖಾಮಠಗಳ ಮತ್ತು ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. 3 ದಿನಗಳ ಕಾಲ ನಾಡಿನ ಅನೇಕ ಹರಗುರುಚರ ಮೂರ್ತಿಗಳ ಸಾನ್ನಿಧ್ಯದಲ್ಲಿ ಅನೇಕ ಧಾರ್ಮಿಕ ಕಾರ್ಯಕ್ರಮಗಳು, ಸಾಮೂಹಿಕ ವಿವಾಹ ಮಹೋತ್ಸವ ಜರುಲಿವೆ. ಎಲ್ಲ ಕಾರ್ಯಗಳಿಗೆ ಭಕ್ತರ ಸಹಾಯ-ಸಹಕಾರ ಸ್ಮರಣೀಯ.
– ಶ್ರೀ ಚನ್ನವೀರ ಮಹಾಸ್ವಾಮಿಗಳು.
ಹೂವಿನಶಿಗ್ಲಿ ಮಠ.