ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಬೆಳ್ಳಟ್ಟಿಯ ಎಪಿಎಂಸಿ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಬೆಳ್ಳಟ್ಟಿ ಇವರ ಸಹಯೋಗದೊಂದಿಗೆ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ನೆರವೇರಿತು.
ಪೂಜಾ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ರಾಮಲಿಂಗೇಶ್ವರ ದಾಸೋಹ ಮಠ ಬೆಳ್ಳಟ್ಟಿಯ ಬಸವರಾಜ ಸ್ವಾಮೀಜಿ, ಮಹಿಳೆಯರ ಆರ್ಥಿಕ ಸಬಲೀಕರಣದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆಯವರ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘವೇ ಮುಖ್ಯ ಕಾರಣ. ಸರ್ಕಾರ ಮಾಡಬೇಕಾದ ಕೆಲಸವನ್ನು ಧರ್ಮಸ್ಥಳದ ಧರ್ಮಾಧಿಕಾರಿಗಳು ಮಾಡುತ್ತಿದ್ದು, ಸರ್ಕಾರದ ಜನಪರ ಯೋಜನೆಗಳನ್ನು ಧರ್ಮಸ್ಥಳದ ಧರ್ಮಾಧಿಕಾರಿಗಳಿಗೆ ನೀಡಿದಲ್ಲಿ ಶೇ 100ರಷ್ಟು ಅಭಿವೃದ್ಧಿಯಾಗುವಲ್ಲಿ ಸಂಶಯವಿಲ್ಲ ಎಂದರು.
ಸಂಸ್ಥೆಯ ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ, ಕ್ಷೇತ್ರ ಧರ್ಮಸ್ಥಳದ ಹಿನ್ನೆಲೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳ ಕುರಿತು ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮದ ಮಹತ್ವದ ಕುರಿತು ಸಮಗ್ರ ಮಾಹಿತಿಯನ್ನು ನೀಡಿದರು.
ಶಿವಪ್ರಕಾಶ ಮಹಾಜನಶೆಟ್ಟರ, ತಿಮ್ಮರೆಡ್ಡಿ ಪಿ. ಮರಡ್ಡಿ ಮಾತನಾಡಿದರು. ಗ್ರಾ.ಪಂ ಅಧ್ಯಕ್ಷ ರಮೇಶ ನಿರ್ವಾಣಶೆಟ್ಟರ, ಮೋಹನ ಗುತ್ತೆಮ್ಮನವರ, ಪರಶುರಾಮ ಮಲ್ಲಾಡದ, ಗಂಗವ್ವ ತಳವಾರ, ತಾಲೂಕಾ ಯೋಜನಾಧಿಕಾರಿ ಪುನೀತ್ ಓಲೇಕಾರ ಮುಂತಾದವರು ಉಪಸ್ಥಿತರಿದ್ದರು.



