ತಮಿಳುನಾಡು: ತಮಿಳುನಾಡಿನ ಗಡಿಭಾಗದ ನಗರ ಹೊಸೂರು ನಲ್ಲಿ ಘನಘೋರ ಘಟನೆ ನಡೆದಿದೆ. ಮದ್ಯದ ನಶೆಯಲ್ಲಿ ವಾಹನ ಚಲಾಯಿಸಿದ್ದ ಕಾಲೇಜು ವಿದ್ಯಾರ್ಥಿಗಳು ಉದ್ದೇಶಪೂರ್ವಕವಾಗಿ ವ್ಯಕ್ತಿಯೊಬ್ಬರ ಮೇಲೆ ಕಾರು ಹತ್ತಿಸಿ ಹತ್ಯೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಘಟನೆಯಲ್ಲಿ 54 ವರ್ಷದ ಶಿವಮೂರ್ತಿ ಮೃತಪಟ್ಟಿದ್ದಾರೆ. ಅವರು ಹೊಸೂರಿನ ಅಣ್ಣೈ ಅರವಿಂದ್ ನಗರ ನಿವಾಸಿಯಾಗಿದ್ದು, ಅಸಿಸ್ಟೆಂಟ್ ಲೇಬರ್ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದರು.
ಮನೆಯ ಮುಂದೆ ಬೈಕ್ ನಿಲ್ಲಿಸಿದ್ದ ಶಿವಮೂರ್ತಿ ಅವರ ವಾಹನಕ್ಕೆ ಕಾರಿನಲ್ಲಿ ಬಂದ ಮೂವರು ವಿದ್ಯಾರ್ಥಿಗಳು ಮೊದಲು ಡಿಕ್ಕಿ ಹೊಡೆದಿದ್ದಾರೆ. ಇದರಿಂದ ಕೋಪಗೊಂಡ ಶಿವಮೂರ್ತಿ ಹಾಗೂ ಅವರ ಕುಟುಂಬಸ್ಥರು ಹೊರಬಂದು ಪ್ರಶ್ನಿಸಿದ್ದು, ಪರಸ್ಪರ ವಾಗ್ವಾದ ನಡೆದಿದೆ.
ವಾಗ್ವಾದದ ಬಳಿಕ ಆರೋಪಿಗಳು ಏಕಾಏಕಿ ಕಾರನ್ನು ಮುಂದೆ ಚಲಾಯಿಸಿ ಶಿವಮೂರ್ತಿ ಅವರ ಮೇಲೆ ಹರಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಶಿವಮೂರ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಶಿವಮೂರ್ತಿ ಅವರ ಮಗ, ಸೊಸೆ ಹಾಗೂ ಮೊಮ್ಮಗ ಗಾಯಗೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ನಂತರ ಸ್ಥಳದಲ್ಲಿದ್ದವರ ಕಿರುಚಾಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಪ್ರಕರಣ ಸಂಬಂಧ ಆದಿತ್ಯ (20), ರಿತಿಕ್ ಕುಮಾರ್ (19) ಮತ್ತು ಹರೀಶ್ (19) ಎಂಬ ಮೂವರು ಆರೋಪಿಗಳನ್ನು ಹೊಸೂರು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಹೊಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಈ ಘಟನೆ ಸ್ಥಳೀಯರಲ್ಲಿ ಆಕ್ರೋಶ ಹುಟ್ಟಿಸಿದ್ದು, ಮದ್ಯದ ನಶೆಯಲ್ಲಿ ವಾಹನ ಚಾಲನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.



