ವಿಜಯನಗರ: ಬೈಕ್ ಹಾಗೂ ಶಾಲಾ ವಾಹನದ ಮಧ್ಯೆ ಡಿಕ್ಕಿ ಹೊಡೆದು ಶಿಕ್ಷಕರೊಬ್ಬರು ಸಾವನ್ನಪ್ಪಿರುವ ಘಟನೆ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕುಪ್ಪಿನಕೇರಿ ಕ್ರಾಸ್ ಬಳಿ ನಡೆದಿದೆ. ಸರ್ಕಾರಿ ಶಾಲೆಯ ಹಿಂದಿ ಶಿಕ್ಷಕ ಮುನಿಯಪ್ಪ (55) ಮೃತ ದುರ್ದೈವಿಯಾಗಿದ್ದು, ಮೂಲತಃ ಹರಪನಹಳ್ಳಿ ತಾಲೂಕಿನ ಉಂಚಳ್ಳಿ ಗ್ರಾಮದವದ ಮುನಿಯಪ್ಪ ಅವರು ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಗೆ ಕೊಠಡಿ ನಿರೀಕ್ಷಕರಾಗಿ ಕರ್ಥವ್ಯಕ್ಕೆ ನಿಯೋಜನೆ ಆಗಿದ್ದರು.
ಕೂಡ್ಲಿಗಿ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಕರ್ತವ್ಯಕ್ಕೆ ತೆರಳುತ್ತಿದ್ದಾಗ ಖಾಸಗಿ ಶಾಲಾ ವಾಹನ ಡಿಕ್ಕಿ ರಭಸಕ್ಕೆ ಹಾರಿ ಬಿದ್ದ ಮುನಿಯಪ್ಪ ಸ್ಥಳದಲ್ಲೇ ರಕ್ತಕಾರಿ ಮೃತಪಟ್ಟಿದ್ದಾರೆ. ಕೊಟ್ಟೂರು ತಾಲೂಕಿನಲ್ಲಿ ಕುಟುಂಬ ಸಮೇತ ವಾಸವಾಗಿದ್ದ ಶಿಕ್ಷಕ ಮುನಿಯಪ್ಪ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಕೂಡ್ಲಿಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.