ನಿನ್ನೆ ನಟ ದಿವಂಗತ ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬ. ಅಪ್ಪು ಬರ್ತಡೇಯನ್ನು ಸಾವಿರಾರು ಮಂದಿ ಸಾರ್ಥಕ ರೀತಿಯಲ್ಲಿ ಆಚರಿಸಿದ್ದಾರೆ. ಅಪ್ಪು ನಿಧನರಾಗಿ ನಾಲ್ಕು ವರ್ಷ ಕಳೆದಿದ್ದರು ವರನಟ ಡಾ.ರಾಜ್‌ಕುಮಾರ್ ಅವರ ಸಹೋದರಿ ಗಾಜನೂರಿನಲ್ಲಿರುವ ನಾಗಮ್ಮ ಅವರಿಗೆ ವಿಷಯ ತಿಳಿದಿಲ್ಲ. ಅಪ್ಪು ಒಂದು ಸಲ ಬಂದು ತನ್ನನ್ನು ನೋಡಲಿ ಎಂದು ನಾಗಮ್ಮಜ್ಜಿ ಅವರ ಆಶಯವಾಗಿದೆ. ಸದ್ಯ ಈ ವಿಡಿಯೋ ಹಲವರಿಗೆ ಕಣ್ಣೀರು ತರಿಸಿದೆ.
95 ವರ್ಷದ ನಾಗಮ್ಮ ಅವರಿಗೆ ಅಪ್ಪು ನಿಧನದ ಸುದ್ದಿ ಆಘಾತ ತರುತ್ತದೆ ಎಂಬ ಕಾರಣಕ್ಕೆ ಇದುವರೆಗೂ ಕುಟುಂಬಸ್ಥರು ಈ ವಿಷಯವನ್ನು ತಿಳಿಸಿಲ್ಲ. ಸಹೋದರ ರಾಜ್‌ಕುಮಾರ್ ಅವರನ್ನು ಕಳೆದುಕೊಂಡಿರೋದೇ ಅವರಿಗೆ ಅರಗಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ, ಇದೀಗ ಪುನೀತ್ ವಿಷಯ ತಿಳಿದರೆ ಏನಾಗುತ್ತೋ ಎಂಬ ಕಾರಣಕ್ಕೆ ಕುಟುಂಬಸ್ಥರು ಇದುವರೆಗೂ ವಿಷಯವನ್ನು ನಾಗಮ್ಮ ಅವರಿಗೆ ತಿಳಿಸಿಲ್ಲ.
ನಾಗಮ್ಮನವರು ಕ್ಯಾಮೆರಾ ಮುಂದೆ ಪುನೀತ್ ಅವರಿಗೆ ನೀಡಿರುವ ಸಂದೇಶ ನೋಡಿದರೆ ಎಂಥವರ ಕಣ್ಣಲು ಕಣ್ಣೀರು ತರಿಸುವಂತಿದೆ. “ಅಬ್ಬಬ್ಬಾ ಐವತ್ತು ವರ್ಷ! ಅಪ್ಪಪ್ಪಾ…! ಚೆನ್ನಾಗಿದ್ದೀಯಾ ಮಗನೇ?” ಪುನೀತ್‌ಗೆ ಐವತ್ತು ವರ್ಷ ಆಯ್ತು ಎಂಬುದನ್ನೂ ನಂಬಲು ಅವರು ತಯಾರಿಲ್ಲ! ಪುನೀತ್‌ನನ್ನು ಇನ್ನೂ ಆಟವಾಡುತ್ತಿರುವ ಸಣ್ಣ ಬಾಲಕನಾಗಿಯೇ ಕಾಣಲು ಅವರಿಗೆ ಇಷ್ಟ. “ಒಂದ್ಸಲ ಬಂದು ನೋಡ್ಕೊಂಡು ಹೋಗೋ ಕಂದಾ ನನ್ನ…” ಎಂದು ಆ ವೃದ್ಧ ಜೀವ ಬೇಡಿಕೊಂಡಿದೆ. ವಿಡಿಯೋ ನೋಡಿದ ಹಲವರು ಈ ಹಿರಿಯ ಜೀವಕ್ಕಾಗಿಯಾದರೂ ಮತ್ತೆ ವಾಪಸ್ ಬಂದು ಬಿಡಿ ಅಪ್ಪು ಎಂದು ಕಣ್ಣೀರು ಹಾಕ್ತಿದ್ದಾರೆ.