ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬನಶಂಕರಿ ದೇವಿಯ ಜಾತ್ರೆ ಉತ್ತರ ಕರ್ನಾಟಕದ ಜಾತ್ರೆಗಳಲ್ಲಿಯೇ ಪ್ರಸಿದ್ಧವಾಗಿದೆ. ಬಾದಾಮಿ ಚಾಲುಕ್ಯ ಅರಸರ ನೆಚ್ಚಿನ ದೇವತೆ ಶ್ರೀ ಬನಶಂಕರಿ ದೇವಿ ಆಗಿದ್ದಳು. ಈ ಜಾತ್ರೆಯು ಪ್ರತಿ ವರ್ಷ ಬನದ ಹುಣ್ಣಿಮೆಯ ದಿವಸ ಜನವರಿ ತಿಂಗಳಲ್ಲಿ ಬರುತ್ತದೆ. ಇದರ ರಥೋತ್ಸವವು ಈ ವರ್ಷ ಜ. 03ರಂದು ಜರುಗಲಿದೆ.
ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಭಕ್ತಾದಿಗಳು ಈ ಬನಶಂಕರಿ ದೇವಿಯ ಜಾತ್ರೆಗೆ ಬರುವರು. ದೇವಿ ಮಂದಿರ, ಸರಸ್ವತಿ ಹಳ್ಳದ ಹಾಗೂ ಬನ ತೋಟಗಳ ಮಧ್ಯದ ಭಾಗದಲ್ಲಿ ಬನದೇವಿಯು ನೆಲೆ ನಿಂತಿದ್ದಾಳೆ. ಬಾಳೆ, ತೆಂಗು, ಎಲೆ ಬಳ್ಳಿ, ಅನೇಕ ಸಸ್ಯಗಳೊಂದಿಗೆ ಈ ಪ್ರದೇಶವು ಕಂಗೊಳಿಸುತ್ತಿದೆ. ಈ ಮೊದಲು ಬಿಜಾಪೂರ ಜಿಲ್ಲೆಗೆ ಒಳಪಡುತ್ತಿದ್ದು, ನಂತರ ಬಾಗಲಕೋಟ ಹೊಸ ಜಿಲ್ಲೆ ಆದ ನಂತರ ಇದರ ಆಡಳಿತಕ್ಕೆ ಬಂದಿದೆ.
ಜಾತ್ರೆಯು ಬನದ ಹುಣ್ಣಿಮೆಯ ದಿವಸ ಪ್ರಾರಂಭವಾಗಿ ಬರುವ ಹುಣ್ಣಿಮೆಯ ತನಕ ಜರಗುತ್ತದೆ. ಬನಶಂಕರಿ ದೇವಿ ದೇವಸ್ಥಾನಕ್ಕೆ ದೀಪಾಲಂಕಾರ, ಹೂವಿನ ಶೃಂಗಾರ ಮಾಡಿರುತ್ತಾರೆ. ಬಾದಾಮಿ ಕಡೆಯಿಂದ ಬರುವ ರಸ್ತೆಗೆ ಎಡ ಬದಿ ಹಾಗೂ ಬಲ ಬದಿಯ ಪ್ರಾರಂಭದಲ್ಲಿ ಕಟ್ಟಿಗೆ ಎಳೆ ಅಡ್ಡೆ, ಚಿತ್ತಾರದ ಬಾಗಿಲು, ಕಿಡಕಿ, ಸಂದಕ, ಗಣಪತಿಯ ಬಾಗಿಲು ಮಾರುವ ಅಡ್ಡೆ, ಬಿದಿರು ಮಾರುವ ಮ್ಯಾದರ ಅಡ್ಡೆ, ಮಾವಿನ ಬೇವಿನ ಹಲಗೆ ಮಾರುವ ಅಡ್ಡೆ, ನಾಟಕ ಕಂಪನಿಗಳ ಸಾಲು, ಅದರ ಪಕ್ಕ ಸೋಡಾದ ಅಂಗಡಿಗಳು, ಚಹಾದ ಅಂಗಡಿಗಳು, ಕಬ್ಬಿನ ಅಂಗಡಿ, ರೈತರ ಸಲಕರಣೆ, ಮನೆಯ ಸಾಮಾನು, ಬಟ್ಟೆ ಅಂಗಡಿಗಳ ಸಾಲು ಮತ್ತು ಒಂದು ಸಾಲು ಕಿರಾಣಿ ಅಂಗಡಿ, ಬಳೆ ಅಂಗಡಿಗಳ ಸಾಲು, ಮಧ್ಯದಲ್ಲಿ ಸಂಚಾರಿ ಪೊಲೀಸ್ ಠಾಣೆ, ಮತ್ತು ಮಿಠಾಯಿ ಅಂಗಡಿ ಸಾಲು, ಅಮೀನಗಡದ ಗೋಕಾಕದ ಕರದಂಟನ ಅಂಗಡಿ, ಖಾನಾವಳಿಗಳು, ಫೋಟೊ ಅಂಗಡಿಗಳು, ಸಿನಿಮಾ ಟೆಂಟ್‌ಗಳು, ಮೊಜೀನ ಆಟಗಳ ಅಂಗಡಿಗಳು ಗುಡಿಯ ಮುಂದೆ ಹೊಂಡ ಹೊಂಡದ ಸುತ್ತ ಕುಂಕುಮ ವಿಭೂತಿ ಅಂಗಡಿಗಳು, ಸರ್ಕಸ್ ಕಂಪನಿ ಹಾಗೂ ಹೊಸ ಹೊಸ ಕಂಪನಿ ಪ್ರಚಾರಕ ಅಂಗಡಿಗಳು ಸಾಲು ಹಚ್ಚುತ್ತವೆ.
ಜಾತ್ರೆಗೆ ವಿವಿಧ ನಾಟಕ ಕಂಪನಿ, ಕಿರುತೆರೆ ನಟ-ನಟಿಯರು ಬಂದು ನಡೆಸುವ ನಾಟಕ ಪ್ರದರ್ಶನ ನೋಡುವುದೇ ಒಂದು ಖುಷಿ. ಜಾತ್ರೆಗೆ ಎತ್ತಿನ ಗಾಡಿ, ರಿಕ್ಷಾ, ಮೋಟಾರು ಸೈಕಲ್, ಕಾರು, ಬಸ್ ಸಂಚಾರದೊಂದಿಗೆ ಹಗಲು-ರಾತ್ರಿ ಬನಶಂಕರಿ ತಾಯಿಯ ದರ್ಶನಕ್ಕೆ ಭಕ್ತರು ಬರುತ್ತಾರೆ. ಜೀವನದಲ್ಲಿ ಒಮ್ಮೆಯಾದರೂ ಈ ಜಾತ್ರೆ ನೋಡುವ ಭಾಗ್ಯ ನಿಮ್ಮದಾಗಬೇಕು. ಜಾತ್ರೆಯ ದಿವಸ ಮಾಡಲಗೇರಿ ಗ್ರಾಮದಿಂದ ತೇರಿನ ಹಗ್ಗವು ಕೋಲಾರದ ಹಳ್ಳಿ ಬಂಡಿಯಲ್ಲಿ ಸಿಂಗರಿಸಿಕೊಂಡು ಜನರು ಹುರುಪಿನಿಂದ ಬರುತ್ತಾರೆ. ದಾರಿಯುದ್ದಕ್ಕೂ ಜಯಘೋಷ ಮಾಡುತ್ತಾ ಮಧ್ಯಾಹ್ನ ಶ್ರೀ ಬನಶಂಕರಿ ದೇವಸ್ಥಾನಕ್ಕೆ ಬರುತ್ತಾರೆ.
ತೇರಿನ ಹಗ್ಗ ತೇರಿಗೆ ಕಟ್ಟಿ ಪೂಜೆ ಮಾಡಿ ಸಂಭ್ರಮದಿಂದ ಪುರೋಹಿತರು ಹಾಗೂ ಜಾತ್ರಾ ಕಮಿಟಿಯವರು ಜನಪ್ರತಿನಿಧಿಗಳ ಅಪಾರ ಭಕ್ತ ಸಮೂಹದಲ್ಲಿ ಸಾಯಂಕಾಲ 5 ಗಂಟೆಗೆ ರಥೋತ್ಸವ ಜರುಗುವುದು. ನಂತರ ಎಲ್ಲರೂ ದೇವಿ ದರ್ಶನ ಪಡೆದು ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ. ಮತ್ತೇಕೆ ತಡ, ಈ ಬಾರಿಯ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು, ಜಾತ್ರೆಯ ಸೊಬಗನ್ನು ನೀವೂ ಕಣ್ತುಂಬಿಕೊಳ್ಳಿ.
-
ಎಸ್.ಎಫ್. ಜಾಲಿಹಾಳ.
ಗದಗ.



