ನಿರ್ದೇಶಕ ಜೋಗಿ ಪ್ರೇಮ್ ಅವರೊಂದಿಗೆ ಕೆಲಸ ಮಾಡಿದ ಅನೇಕ ಕಲಾವಿದರು ಮತ್ತು ತಂತ್ರಜ್ಞರು ಚಿತ್ರರಂಗದಲ್ಲಿ ಸ್ವತಂತ್ರವಾಗಿ ಗುರುತಿಸಿಕೊಂಡಿದ್ದಾರೆ. ಆ ಪಟ್ಟಿಗೆ ಇದೀಗ ಹಾಸ್ಯ ನಟ ಶಿವಮಂಜು ಕೂಡ ಸೇರ್ಪಡೆಯಾಗುತ್ತಿದ್ದಾರೆ. ಕಳೆದ ಎರಡು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಪೋಷಕ ಹಾಗೂ ಹಾಸ್ಯ ಕಲಾವಿದನಾಗಿ ಗುರುತಿಸಿಕೊಂಡಿರುವ ಶಿವಮಂಜು, ಈಗ ಮೊದಲ ಬಾರಿಗೆ ನಿರ್ದೇಶಕನಾಗಿ ಪದಾರ್ಪಣೆ ಮಾಡುತ್ತಿದ್ದಾರೆ.
ಸುಮಾರು 12 ವರ್ಷಗಳ ಕಾಲ ಜೋಗಿ ಪ್ರೇಮ್ ಅವರೊಂದಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿ ಅನುಭವ ಸಂಪಾದಿಸಿರುವ ಶಿವಮಂಜು, ತಮ್ಮ ನಿರ್ದೇಶನದ ಮೊದಲ ಚಿತ್ರಕ್ಕೆ ಭಾನುವಾರ ನಾಗರಭಾವಿಯ ಶ್ರೀ ರಾಘವೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಸ್ಕ್ರಿಪ್ಟ್ ಪೂಜೆ ನೆರವೇರಿಸಿದರು.
ನಿರ್ಮಾಪಕ ಮಧು ಅವರ ಮಾರ್ಕ್ ಮೂವೀ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ದೊಡ್ಡ ಮಟ್ಟದಲ್ಲಿ ನಿರ್ಮಾಣವಾಗುತ್ತಿದೆ. ಈ ವಿಶೇಷ ಕಾರ್ಯಕ್ರಮಕ್ಕೆ ‘ಕಂಗ್ರಾಚುಲೇಶನ್ಸ್ ಬ್ರದರ್’ ಖ್ಯಾತಿಯ ಹರಿಸಂತೋಷ್ ಆಗಮಿಸಿ ಶಿವಮಂಜು ಅವರ ಹೊಸ ಪ್ರಯತ್ನಕ್ಕೆ ಶುಭ ಹಾರೈಸಿದರು.
ಹಲವಾರು ತಿಂಗಳ ಕಾಲ ಶ್ರಮಪಟ್ಟು ಸಿದ್ಧಪಡಿಸಿರುವ ಗಟ್ಟಿ ಕಥೆ ಮತ್ತು ವಿಭಿನ್ನ ಕಾನ್ಸೆಪ್ಟ್‌ೊಂದಿಗೆ ಈ ಚಿತ್ರವನ್ನು ದೊಡ್ಡ ತಾರಾಗಣದೊಂದಿಗೆ ನಿರ್ದೇಶಿಸಲು ಶಿವಮಂಜು ಸಜ್ಜಾಗಿದ್ದಾರೆ. ಶೀಘ್ರದಲ್ಲೇ ಚಿತ್ರದ ಶೂಟಿಂಗ್ ಆರಂಭವಾಗಲಿದ್ದು, ಅದೇ ಸಂದರ್ಭದಲ್ಲಿ ನಾಯಕ, ನಾಯಕಿ ಹಾಗೂ ತಾಂತ್ರಿಕ ವರ್ಗದ ವಿವರಗಳನ್ನು ಪ್ರಕಟಿಸಲಾಗುವುದು ಎಂದು ತಂಡ ತಿಳಿಸಿದೆ.



