ವಿಜಯಸಾಕ್ಷಿ ಸುದ್ದಿ, ಗದಗ: ಪಾಠ ಹೇಳಿ, ಜ್ಞಾನಾರ್ಜನೆ ಮಾಡಿಸಿ ಬದುಕಿಗೆ ಬೆಳಕಾದ ಶಿಕ್ಷಕರನ್ನು ಎಂದಿಗೂ ಮರೆಯಬಾರದು ಎಂದು ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಎ. ಬಳಿಗೇರ ಹೇಳಿದರು.
ಅವರು ಜಿಲ್ಲೆಯ ಶಿರಹಟ್ಟಿ ಪಟ್ಟಣದ ಸಿ.ಸಿ.ಎನ್. ಪ್ರೌಢಶಾಲೆಯಲ್ಲಿ 2008-2011ನೇ ಸಾಲಿನಲ್ಲಿ ವ್ಯಾಸಂಗ ಮಾಡಿದ ಹಳೆಯ ವಿದ್ಯಾರ್ಥಿಗಳ ಸ್ನೇಹಿತರ ಬಳಗದಿಂದ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗುರುಗಳ ಸೇವೆಯನ್ನು ಸ್ಮರಿಸುವುದು ಮತ್ತು ಅವರಿಗೆ ಪ್ರತ್ಯಕ್ಷವಾಗಿ ಧನ್ಯತೆ ಸಮರ್ಪಣೆ ಮಾಡುವುದು ಸಾರ್ಥಕ ಕಾರ್ಯ. ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿರುವ ಹಳೆಯ ವಿದ್ಯಾರ್ಥಿಗಳು 15 ವರ್ಷದ ನಂತರ ಒಂದೆಡೆ ಸೇರಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ನಿವೃತ್ತ ಶಿಕ್ಷಕ ವಿ.ಎಸ್. ಶಟವಾಜಿ ಮಾತನಾಡಿ, ಪಾಠ ಮಾಡಿದ ಗುರುಗಳು ಯಾವುದೇ ಅಪೇಕ್ಷೆ ಇಲ್ಲದೆ ಶಿಷ್ಯರ ಭವಿಷ್ಯ ರೂಪಿಸುತ್ತಾರೆ. ಜೀವನಕ್ಕೆ ಮಾರ್ಗದರ್ಶಕರಾಗುತ್ತಾರೆ. ಆದರೆ ಇಂದಿನ ಶಿಕ್ಷಣ ಪದ್ಧತಿ ಸಾಕಷ್ಟು ಬದಲಾಗಿದೆ. ಮಕ್ಕಳಿಗೆ ದಂಡಿಸದೆ, ಶಿಕ್ಷಿಸದೆ ಪಾಠ ಮಾಡಬೇಕು ಎಂದು ಪಾಲಕರೇ ತಾಕೀತು ಮಾಡುತ್ತಾರೆ. ಇದು ಬೇಸರದ ಸಂಗತಿ ಎಂದರು.
ಶಿಕ್ಷಕರಾದ ಸಿ.ಎಂ. ಪತ್ತಾರ ಹಾಗೂ ಪಿ.ವಿ. ಹಿರೇಮಠ ಅವರು ಮಾತನಾಡಿ, ವಿದ್ಯಾರ್ಥಿಗಳ ಕಲಿಕೆ ಶ್ರೇಷ್ಠ ಮಟ್ಟದಲ್ಲಿ ಇರಬೇಕು ಎಂಬುದಕ್ಕಾಗಿ ಗುರುಗಳು ದಂಡಿಸುತ್ತಾರೆ. ಬಾಲ್ಯದಲ್ಲಿ ತಿದ್ದದೇ, ತಪ್ಪಿಗೆ ಶಿಕ್ಷೆ ನೀಡದೇ ಕಲಿಸುವ ಶಿಕ್ಷಣವು ನಿಜವಾದ ಶಿಕ್ಷಣವೇ ಅಲ್ಲ. ವಿದ್ಯಾರ್ಥಿಗಳ ಬದುಕು ಹಸನಾಗಲಿ ಎಂದು ಮಾತ್ರ ಶಿಕ್ಷಕರು ಬಯಸುತ್ತಾರೆ. ಈ ನಿಟ್ಟಿನಲ್ಲಿ ಇಂದಿನ ಶಿಕ್ಷಕ-ಪಾಲಕರ ಸಂಬಂಧ ಉನ್ನತೀಕರಣಗೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ನಿವೃತ್ತ ಶಿಕ್ಷಕ ಎಚ್.ಎಂ. ದೇವಗಿರಿ ಮಾತನಾಡಿ, ಪ್ರತಿಯೊಬ್ಬರೂ ಗುರು ಋಣ ಮತ್ತು ಪಿತೃಋಣಗಳನ್ನು ತೀರಿಸುವ ಕಾರ್ಯ ಮಾಡಬೇಕು. ಇದರಿಂದ ಉತ್ತರೋತ್ತರ ಸಾರ್ಥಕತೆಯನ್ನು ಸಂಭ್ರಮಿಸಬಹುದು ಎಂದು ಹೇಳಿದರು.
ನಿವೃತ್ತ ಶಿಕ್ಷಕ ಬಿ.ಎಂ. ಲಮಾಣಿ ಮಾತನಾಡಿ, 15 ವರ್ಷದ ಹಿಂದೆ ನಮ್ಮಿಂದ ಪಾಠ ಕೇಳಿದ ಮಕ್ಕಳು ಇಂದು ಉನ್ನತ ಸ್ಥಾನಗಳಲ್ಲಿದ್ದಾರೆ. ಅವರೆಲ್ಲರೂ ಒಂದೆಡೆ ಸೇರಿ ನಮ್ಮನ್ನು ನೆನಪಿಸಿಕೊಂಡು, ಗುರುವಂದನೆ ಸಲ್ಲಿಸಿರುವುದು ನಮ್ಮ ಬದುಕಿನ ಸುವರ್ಣ ಘಳಿಗೆ ಎಂದರು.
ಇದೇ ಸಂದರ್ಭದಲ್ಲಿ ಅಗಲಿದ ಶಿಕ್ಷಕ ಎ.ಬಿ. ಹರ್ಲಾಪುರ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸ್ನೇಹ ಬಳಗದ ಜ್ಯೋತಿ ಪತ್ತಾರ ಪ್ರಾಸ್ತಾವಿಕ ಮಾತನಾಡಿದರು. ಸುಧಾ, ಅಶ್ವಿನಿ ಪ್ರಾರ್ಥಿಸಿದರು. ಶ್ರೀದೇವಿ ವರವಿ ಸ್ವಾಗತಿಸಿದರು. ಅಕ್ಕಮ್ಮ ಗೌಳಿ ನಿರೂಪಿಸಿದರೆ, ಯಲ್ಲಮ್ಮ ಕೋಳಿ ವಂದಿಸಿದರು. ಅಶ್ವಿನಿ ಕಡಕಬಾವಿ ಸನ್ಮಾನ ಕಾರ್ಯಕ್ರಮ ನಿರ್ವಹಿಸಿದರು. ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ನಾಣಕಿ ನಾಯ್ಕ, ಎಸ್.ಡಿ.ಎಂ.ಸಿ ಅಧ್ಯಕ್ಷ ನಾಗರಾಜ ಲಕ್ಕುಂಡಿ ಉಪಸ್ಥಿತರಿದ್ದರು.
ಗೌರವ ಸಮರ್ಪಣೆ
ನಿವೃತ್ತ ಶಿಕ್ಷಕರಾದ ಕೆ.ಎ. ಬಳಿಗೇರ, ಎಚ್.ಎಂ. ದೇವಗಿರಿ, ವಿ.ಎಸ್. ಶಟವಾಜಿ, ಬಿ.ಎಂ. ಲಮಾಣಿ, ಹಾಗೂ ಶಿಕ್ಷಕರಾದ ಪಿ.ವಿ. ಹಿರೇಮಠ, ಸಿ.ಎಂ. ಪತ್ತಾರ, ವೆಂಕಟೇಶ ಪಾಟೀಲ, ಶಿಕ್ಷಕರಾದ ಸಂಧ್ಯಾ ಕಾಂಬಳೆ, ಶೋಭಾ ಮೂರಶಿಳ್ಳಿ, ಶಾಲೆಯ ಮುಖ್ಯೋಪಾಧ್ಯಾಯೆ ಚಂಪಾ ಪಾಟೀಲ ಅವರಿಗೆ ಹಳೆಯ ವಿದ್ಯಾರ್ಥಿಗಳು ಗೌರವ ಸಮರ್ಪಣೆ ಮಾಡಿದರು.