ತುಮಕೂರು: “ನಡೆಯುವ ದೇವರು” ಎಂದೇ ಜನಮನದಲ್ಲಿ ನೆಲೆಸಿರುವ ಸಿದ್ದಗಂಗಾ ಶ್ರೀ ಶಿವಕುಮಾರ ಮಹಾಯೋಗಿಗಳ ಲಿಂಗೈಕ್ಯಕ್ಕೆ ನಾಳೆ 7 ವರ್ಷ. ಆದರೆ ಅವರ ಸೇವೆ, ತ್ಯಾಗ ಮತ್ತು ಮಾನವೀಯತೆ ಇಂದು ಕೂಡ ಲಕ್ಷಾಂತರ ಜನರ ಹೃದಯದಲ್ಲಿ ಜೀವಂತವಾಗಿದೆ.
ಈ ಹಿನ್ನೆಲೆಯಲ್ಲಿ ಸಿದ್ದಗಂಗಾ ಮಠದಲ್ಲಿ ಭವ್ಯ ಪುಣ್ಯ ಸಂಸ್ಮರಣೋತ್ಸವಕ್ಕೆ ಸಕಲ ಸಿದ್ಧತೆ ನಡೆದಿದೆ. ವಿಶೇಷವೆಂದರೆ, ಈ ಪವಿತ್ರ ಕಾರ್ಯಕ್ರಮಕ್ಕೆ ದೇಶದ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಸ್ವತಃ ಆಗಮಿಸಿ ಗೌರವ ಸಲ್ಲಿಸಲಿದ್ದಾರೆ.
ಬೆಳಗ್ಗೆ 10:50ಕ್ಕೆ ಮಠಕ್ಕೆ ಆಗಮಿಸುವ ಉಪರಾಷ್ಟ್ರಪತಿಗಳು, ಮೊದಲು ಶಿವಕುಮಾರ ಶ್ರೀಗಳ ಗದ್ದಿಗೆಗೆ ಪೂಜೆ ಸಲ್ಲಿಸಿ, ನಂತರ ಗೋಸಲ ಸಿದ್ದೇಶ್ವರ ವೇದಿಕೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮತ್ತು ಕೇಂದ್ರ ಸಚಿವ ವಿ. ಸೋಮಣ್ಣ ಸಹ ಉಪಸ್ಥಿತರಿರಲಿದ್ದಾರೆ.
ಬೆಳಗ್ಗೆ 5 ಗಂಟೆಯಿಂದಲೇ ಮಠದಲ್ಲಿ ಪೂಜಾ ಕೈಂಕರ್ಯಗಳು ಆರಂಭವಾಗಲಿದ್ದು, ಮಂತ್ರಘೋಷಗಳೊಂದಿಗೆ ಗದ್ದಿಗೆ ಪೂಜೆ, ರುದ್ರಾಕ್ಷಿ ಮಂಟಪದಲ್ಲಿ ಪುತ್ಥಳಿ ಮೆರವಣಿಗೆ ಸೇರಿದಂತೆ ಭಕ್ತಿಭಾವದಿಂದ ಕೂಡಿದ ವಿಧಿವಿಧಾನಗಳು ನಡೆಯಲಿವೆ.
ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗಸ್ವಾಮೀಜಿ, ಸದ್ಗುರು ಮಧುಸೂದನ ಸಾಯಿ ಹಾಗೂ ಉತ್ತರಾಧಿಕಾರಿ ಶಿವಸಿದ್ದೇಶ್ವರ ಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸುವ ಮೂಲಕ ಈ ಕಾರ್ಯಕ್ರಮಕ್ಕೆ ಮತ್ತಷ್ಟು ಘನತೆ ನೀಡಲಿದ್ದಾರೆ.



