ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಇಲ್ಲಿಯ ಗ್ರಾಮ ಸಭೆಯಲ್ಲಿ ಗ್ರಾಮ ಪಂಚಾಯಿತಿಯ ವಾಣಿಜ್ಯ ಮಳಿಗೆಯ ಟೆಂಡರ್ ಪ್ರಕ್ರಿಯೆ ನಡೆದು, ಒಂದು ಮಾರಾಟ ಮಳಿಗೆಯು ದಾಖಲೆಯ 31100 ರೂ ಹರಾಜು ಪಡೆದುಕೊಂಡಿದ್ದು, ಇಂತಹ ಅತ್ಯಧಿಕ ಏರಿಕೆಯ ಹರಾಜು ಗದಗ, ಹುಬ್ಬಳ್ಳಿಯಂತಹ ನಗರಗಳಲ್ಲಿಯೂ ಸಹ ಆಗಿಲ್ಲವೆಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿತು.
ಒಟ್ಟು 22 ವಾಣಿಜ್ಯ ಮಳಿಗೆಗಳಲ್ಲಿ 2 ಮಳಿಗೆ ಸ್ತ್ರೀ ಶಕ್ತಿ ಸಂಘಗಳಿಗೆ, 3 ಎಸ್.ಸಿ. ವರ್ಗಕ್ಕೆ, 1 ಎಸ್.ಟಿ, 1 ವಿಕಲಚೇತನರು, 1 ಮಾಜಿ ಸೈನಿಕರಿಗೆ ಮೀಸಲಾತಿ ಸೇರಿದಂತೆ 14 ಮಳಿಗೆಗಳು ಸಾಮಾನ್ಯ ವರ್ಗದ ಜನರಿಗೆ ಟೆಂಡರ್ ನಡೆಯಿತು. ಸ್ತ್ರೀ ಶಕ್ತಿ ಸಂಘಕ್ಕೆ 2600 ರೂ.ಗಳಿಗೆ ಹರಾಜು ಆಗಿ ಉಳಿದಂತೆ ತಿಂಗಳಿಗೆ 3500 ರೂ.ನಿಂದ ಆರಂಭವಾಗಿ 31100 ರೂವರೆಗೂ ಹರಾಜು ನಡೆಯಿತು.
ಗ್ರಾಮದಲ್ಲಿ ನಡೆಯುವ ವಾರದ 2 ಸಂತೆಗಳ ಕರ ವಸೂಲಿ ಹರಾಜು 52500 ರೂ.ಗೆ ಆಯಿತು. ಗ್ರಾ.ಪಂ ಒಂದು ಮಳಿಗೆಗೆ ತಿಂಗಳಿಗೆ 2500 ರೂ ಬಾಡಿಗೆ ನಿಗದಿಪಡಿಸಲಾಗಿತ್ತು. 90 ಜನರು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಗ್ರಾ.ಪಂ ಅಧ್ಯಕ್ಷ ಕೆ.ಎಸ್. ಪೂಜಾರ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಪುಷ್ಪಾ ಪಾಟೀಲ, ಗ್ರಾ.ಪಂ ಸದಸ್ಯರು ಹಾಜರಿದ್ದರು. ಪಿ.ಡಿ.ಒ ಅಮೀರನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಪ್ರದೀಪ ಆಲೂರ ಟೆಂಡರ್ ನಿಯಮಾವಳಿಗಳ ಬಗ್ಗೆ ಸಭೆಗೆ ವಿವರಿಸಿದರು.