ಬೆಂಗಳೂರು: “ಯಾರ ನಾಯಕತ್ವ ಬಂದರೆ ಕಮಿಷನ್ ಸಂಸ್ಕೃತಿ ಹೋಗುತ್ತದೆ ಎಂದು ಜನರು ತೀರ್ಮಾನಿಸಲಿ” ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಬಿಜೆಪಿ ಶಾಸಕ ಚಂದ್ರು ಲಮಾಣಿ ಬಂಧನದ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ತಾವು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಕಮಿಷನ್ ಆರೋಪಗಳು ಕೇಳಿಬಂದಿಲ್ಲ ಎಂದು ಹೇಳಿದರು.
“ನಾನು ಎರಡು ಬಾರಿ ಸಿಎಂ ಆಗಿದ್ದಾಗ ಪ್ರತಿ ತಿಂಗಳ 30ರಂದು ಗುತ್ತಿಗೆದಾರರ ಮನೆ ಬಾಗಿಲಿಗೆ ಹಣ ಬಿಡುಗಡೆ ಮಾಡುವ ಚೆಕ್ ಹೋಗುತ್ತಿತ್ತು. ಅಷ್ಟು ಕಟ್ಟುನಿಟ್ಟಾಗಿ ಆಡಳಿತ ನಡೆಸಿದ್ದೇವೆ” ಎಂದು ತಿಳಿಸಿದರು.
ಚಂದ್ರು ಲಮಾಣಿ ಲೋಕಾಯುಕ್ತ ಟ್ರ್ಯಾಪ್ ವಿಚಾರವಾಗಿ ಮಾತನಾಡಿದ ಅವರು, ಆ ವಿಷಯವನ್ನು ಸಂಬಂಧಿಸಿದ ಶಾಸಕರನ್ನೇ ಕೇಳಬೇಕು ಎಂದರು. ಸತೀಶ್ ಜಾರಕಿಹೊಳಿ ಎಲ್ಲಾ ಕಾಲದಲ್ಲೂ ಕಮಿಷನ್ ನಡೆಯುತ್ತಿತ್ತು ಎಂದು ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿ, “ನಾನು ಸಿಎಂ ಆಗಿದ್ದಾಗ ಕಮಿಷನ್ ನಡೆದಿತ್ತು ಎಂದು ಯಾರು ಹೇಳಿಲ್ಲ” ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಇಂತಹ ಪರಿಸ್ಥಿತಿ ಸರಿಯಾಗಬೇಕಾದರೆ ಯಾವ ನಾಯಕತ್ವವನ್ನು ಆಯ್ಕೆ ಮಾಡಿದರೆ ಭ್ರಷ್ಟಾಚಾರ ಸಂಪೂರ್ಣವಾಗಿ ಹೋಗಲಾಡಿಸಬಹುದು ಎಂಬುದನ್ನು ಜನರು ತೀರ್ಮಾನಿಸಲಿ ಎಂದು ಅವರು ಹೇಳಿದರು.



