ವಿಜಯಸಾಕ್ಷಿ ಸುದ್ದಿ, ರೋಣ: ಮತಕ್ಷೇತ್ರದ ಸರಕಾರಿ ಶಾಲೆಗಳ ಸಮಗ್ರ ಅಭಿವೃದ್ಧಿಗೆ ಬದ್ಧವಾಗಿದ್ದು, ಈಗಾಗಲೇ ಅನೇಕ ಸರಕಾರಿ ಶಾಲೆಗಳಿಗೆ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ರಾಜ್ಯ ಖನಿಜ ನಿಗಮದ ಅಧ್ಯಕ್ಷರು, ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಅವರು ಸೋಮವಾರ ಅಬ್ಬಿಗೇರಿ ಗ್ರಾಮದ ಬಳಿಯಿರುವ ಮಾಜಿ ಪ್ರದಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಶಾಲೆಗೆ 2 ಕೋಟಿ ರೂಗಳ ಸಿಸಿ ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆಯನ್ನು ನೆರವೇರಿಸಿ ಮಾತನಾಡಿದರು.
ರೋಣ ಪಟ್ಟಣಕ್ಕೆ ವಾಜಪೇಯಿ ಶಾಲೆಯನ್ನು ತರಬೇಕು ಎನ್ನುವುದು ನನ್ನ ಕನಸಾಗಿತ್ತು. ಈ ಕನಸಿನಿಂದ ಇಂದು ಗ್ರಾಮೀಣ ಭಾಗದ ನೂರಾರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ. ಸ್ವಂತ ಕಟ್ಟಡವಿಲ್ಲದ ಈ ಶಾಲೆಗೆ ಅಬ್ಬಿಗೇರಿ ಗ್ರಾಮದ ಬಳಿ ಜಮೀನು ಖರೀದಿಸಿ, ಸುಸಜ್ಜಿತ ದೊಡ್ಡ ಕಟ್ಟಡವನ್ನು ನಿರ್ಮಿಸುವ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲಾಯಿತು. ಅಬ್ಬಿಗೇರಿ ಗ್ರಾಮಸ್ಥರ ಶಿಕ್ಷಣ ಪ್ರೇಮ ಮೆಚ್ಚುವಂತದ್ದು ಎಂದರು.
ಸರ್ವ ಜನಾಂಗದವರ ಮಕ್ಕಳಿಗೆ ಅಕ್ಷರ ಜ್ಞಾನ ಸಿಗಬೇಕು ಎಂಬ ಮಹತ್ವದ ಉದ್ದೇಶದಿಂದ ರೋಣ, ಗಜೇಂದ್ರಗಡ ಪಟ್ಟಣಗಳಿಗೆ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ವಸತಿ ನಿಲಯ, ಹಿಂದುಳಿದ ವರ್ಗಗಳ ವಸತಿ ನಿಲಯಗಳನ್ನು ನರೇಗಲ್ಲ ಹಾಗೂ ರೋಣದಲ್ಲಿ ಈಗಾಗಲೇ ಆರಂಭಿಸಲಾಗಿದೆ. ಮುಖ್ಯವಾಗಿ ಮತಕ್ಷೇತ್ರದಲ್ಲಿ ಸರಕಾರಿ ಶಾಲೆಗಳ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಗಳಿಸಿ ಖಾಸಗಿ ಸಂಸ್ಥೆಗಳಿಗಿAತ ನಾವೇನು ಕಮ್ಮಿಯಿಲ್ಲ ಎಂದು ಸಾಧಿಸಿ ತೋರಿಸಿದ್ದಾರೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಮತ್ತಷ್ಟು ಗುಣಮಟ್ಟದ ಶಿಕ್ಷಣ ನಿಡಬೇಕು. ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೆ ಅಕ್ಷರ ಜ್ಞಾನ ಪಡೆಯುವತ್ತ ಗಮನ ಹರಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ವಾಜಪೇಯಿ ಶಾಲಾ ವಿದ್ಯಾರ್ಥಿಗಳ ಪಾಲಕರ ಅನುಕೂಲಕ್ಕಾಗಿ ಬಸ್ ತಂಗುದಾಣಕ್ಕೆ ಭೂಮಿ ಪೂಜೆಯನ್ನು ನೆರವೇರಿಸಿದರು. ಗ್ರಾ.ಪಂ ಅಧ್ಯಕ್ಷೆ ಲಲಿತಾ ರಾಠೋಡ ಅಧ್ಯಕ್ಷತೆ ವಹಿಸಿದ್ದರು. ಎಸ್.ಎಚ್. ಸೋಂಪುರ, ಯೂಸುಪ್ ಇಟಗಿ, ವಿ.ಬಿ. ಸೋಮನಕಟ್ಟಿಮಠ, ಬಸವರಾಜ ತಳವಾರ, ರೂಪಾ ಅಂಗಡಿ, ಬಸವರಾಜ ಪಲ್ಲೇದ, ಬಾಬುಗೌಡ ಪಾಟೀಲ ಸೇರಿದಂತೆ ಗ್ರಾ.ಪಂ ಸದಸ್ಯರು ಹಾಗೂ ಮುಖಂಡರು ಉಪಸ್ಥಿತರಿದ್ದರು.
ವಾಜಪೇಯಿ ಶಾಲೆಯಲ್ಲಿ ಎದುರಾಗಿದ್ದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ 8 ಕಿ.ಮೀ ದೂರದ ಅಬ್ಬಿಗೇರಿ ಗ್ರಾಮದಿಂದ ಪೈಪ್ಲೈನ್ ಅಳವಡಿಸಿ ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲಾಗಿದೆ.
– ಜಿ.ಎಸ್. ಪಾಟೀಲ.
ಶಾಸಕರು, ರೋಣ.