ವಿಜಯಸಾಕ್ಷಿ ಸುದ್ದಿ, ಧಾರವಾಡ: ಧಾರವಾಡ ಜಿಲ್ಲೆಯಲ್ಲಿ ಶೈಕ್ಷಣಿಕ ಸುಧಾರಣೆ ಹಾಗೂ ಕಲಿಕಾ ಗುಣಮಟ್ಟ ಹೆಚ್ಚಿಸಲು ಮಿಷನ್ ವಿದ್ಯಾಕಾಶಿ ಯೋಜನೆಯಡಿ ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ದಾಖಲಾಗಿ, ಗೈರು ಹಾಜರು ಇರುವ ಮಕ್ಕಳ ಮನೆಗೆ ಭೇಟಿ ನೀಡಿ, ಮನ ಒಲಿಸುವ ಮತ್ತು ಪ್ರೋತ್ಸಾಹಿಸುವ ಕಾರ್ಯಕ್ಕಾಗಿ ಸಮುದಾಯದ ಸಹಭಾಗಿತ್ವವನ್ನು ಜಿಲ್ಲಾಡಳಿತ ಮತ್ತು ಶಿಕ್ಷಣ ಇಲಾಖೆ ಬಯಸುತ್ತದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
ಅವರು ಬುಧವಾರ ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಂಗಣದಲ್ಲಿ ಶಾಲಾ ಹಾಜರಾತಿ ಹೆಚ್ಚಿಸುವ ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ, ಮರಳಿ ಶಾಲೆಗೆ ಸೇರಿಸುವಲ್ಲಿ ಸಮುದಾಯಗಳ ಸಹಭಾಗಿತ್ವ ಕಾರ್ಯಕ್ರಮದಡಿ ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪ್ರಮುಖರ ಮತ್ತು ವಿವಿಧ ಸರ್ಕಾರಿ ಸಮಿತಿಗಳ ಸದಸ್ಯರ, ಪ್ರತಿನಿಧಿಗಳ ಸಭೆ ಜರುಗಿಸಿ ಮಾತನಾಡಿದರು.
ಕಳೆದ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ. 37.08ರಷ್ಟು ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು ಮತ್ತು ಶೇ. 35.24ರಷ್ಟು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಹಾಗೂ ಶೇ. 49.05ರಷ್ಟು ಅಲ್ಪಸಂಖ್ಯಾತ ಸಮುದಾಯಗಳ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟು ಸಂಖ್ಯೆಗೆ ಹೋಲಿಸಿದಾಗ ಇದು ಬಹಳ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಶಾಲೆಗೆ ದಾಖಲಾಗಿರುವ ಪ್ರತಿ ಮಗು ಶಾಲೆಗೆ ಬಂದು ಎಲ್ಲ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಮತ್ತು ನಿರಂತರವಾಗಿ ಶಾಲೆಯಲ್ಲಿದ್ದು, ಉತ್ತಮ ಶೈಕ್ಷಣಿಕ ಪ್ರಗತಿ ಹೊಂದಲು ಈ ಸಮುದಾಯಗಳ ಪ್ರಮುಖರ ಹಾಗೂ ಹಿರಿಯರ ಸಹಕಾರ ಅಗತ್ಯವಿದೆ ಎಂದು ತಿಳಿಸಿದರು.
ಪೋಷಕರು ಮತ್ತು ಸಮುದಾಯದ ಸಹಭಾಗಿತ್ವವನ್ನು ಹೆಚ್ಚಿಸಲು ಕಾರ್ಯತಂತ್ರಗಳನ್ನು ರೂಪಿಸುವುದು ಮಹತ್ವವಾಗಿದೆ. ಕಳೆದ ವರ್ಷದ ಎಸ್.ಎಸ್.ಎಲ್.ಸಿ ಫಲಿತಾಂಶದ ಅಂಕಿ-ಅಂಶಗಳನ್ನು ಗಮನಿಸಿದಾಗ ಜಿಲ್ಲಾವಾರು, ತಾಲೂಕುವಾರು, ಮತ್ತು ಶಾಲಾವಾರು ಎಸ್ಸಿ ಮತ್ತು ಎಸ್ಟಿ ಸೇರಿದಂತೆ ಅನುತ್ತೀರ್ಣವಾದ ವಿದ್ಯಾರ್ಥಿಗಳು ಯಾವ ವಿಷಯಗಳಲ್ಲಿ ಹೆಚ್ಚು ಅಂಕ ಕಳೆದುಕೊಳ್ಳುತ್ತಿದ್ದಾರೆ ಎಂಬುದರ ಚರ್ಚೆ ಮಾಡಿ ಸೂಕ್ತವಾದ ಕ್ರಮಗಳನ್ನು ವಹಿಸಬೇಕೆಂದು ಅವರು ಹೇಳಿದರು.
ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಶುಭಾ ಪಿ ಸ್ವಾಗತಿಸಿ, ಸಮಾಜ ಕಲ್ಯಾಣ ಇಲಾಖೆ, ಅರೆ ಅಲೆಮಾರಿ ಸಮುದಾಯ ಅಭಿವೃದ್ಧಿ ನಿಗಮ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಯೋಜನೆಗಳ ಕುರಿತು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು. ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್. ಕೆಳದಿಮಠ ಶಾಲಾ ಶಿಕ್ಷಣ ಇಲಾಖೆಯ ಮಕ್ಕಳ ದಾಖಲಾತಿ, ಕಲಿಕೆ ಮತ್ತು ಎಸ್.ಎಸ್.ಎಲ್.ಸಿ ಫಲಿತಾಂಶದ ಕುರಿತು ಪ್ರಾತ್ಯಕ್ಷಿಕೆಯ ಮೂಲಕ ಸಭೆಯಲ್ಲಿ ಚರ್ಚಿಸಿದರು. ಉಪ ಸಮನ್ವಯ ಅಧಿಕಾರಿ ಡಾ. ರೇಣುಕಾ ಅಮಲಜೇರಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಭೆ ನಿರ್ವಹಿಸಿದರು.
ಸಭೆಯಲ್ಲಿ ಎಸ್ಸಿ-ಎಸ್ಟಿ ಸಮುದಾಯದ ಪ್ರಮುಖರಾದ ಎಮ್.ಅರವಿಂದ, ಪ್ರೇಮನಾಥ ಕೆ. ಚಿಕ್ಕತುಂಬಳ, ಲಕ್ಷ್ಮಣ ಬಕ್ಕಾಯಿ, ಸುರೇಶ ಮಾಕಪ್ಪನವರ, ಕಲ್ಮೇಶ ಹಾದಿಮನಿ, ಅಶೋಕ ದೊಡ್ಡಮನಿ, ಮೋಹನ ಹಿರೇಮನಿ, ಯಲ್ಲಪ್ಪ ಮಂಟೂರ, ಹನುಮಂತಪ್ಪ ಚಲವಾದಿ, ಮಂಜುನಾಥ ಸವಣೂರ ಸೇರಿದಂತೆ ವಿವಿಧ ಮುಖಂಡರು, ಮಹಿಳಾ ಪ್ರಮುಖರು ಮಾತನಾಡಿದರು.
ಗ್ರಾಮ ಮಟ್ಟದಲ್ಲಿ ಅಧಿಕಾರಿಗಳ ಮತ್ತು ಗ್ರಾಮಸ್ಥರ ಸಹಕಾರದಲ್ಲಿ ತಂಡಗಳನ್ನು ರಚಿಸಿ, ಶಿಕ್ಷಕರೊಂದಿಗೆ ಸಮನ್ವಯ ಸಾಧಿಸಿ, ಶಾಲೆಯ ಪ್ರತಿ ಗೈರು ವಿದ್ಯಾರ್ಥಿಯ ಮನೆಗೆ ಭೇಟಿ ನೀಡುವ ಮತ್ತು ಶಾಲಾ ಹಾಜರಾತಿ ಹಾಗೂ ಶೈಕ್ಷಣಿಕ ಸೌಲಭ್ಯಗಳ ಸದ್ಬಳಕೆಗಾಗಿ ಮಕ್ಕಳ ವಿಶೇಷ ಗ್ರಾಮ ಸಭೆಗಳನ್ನು ಆಯೋಜಿಸಲು ಜಿ.ಪಂ ಸಿಇಓ ಅವರಿಂದ ಕ್ರಮವಹಿಸುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು.



