ವಿಜಯಸಾಕ್ಷಿ ಸುದ್ದಿ, ಗದಗ: ಕನ್ನಡ ಭಾಷೆಯ ಸೊಬಗು ಸೊಗಸಾದುದು. ಸಮೃದ್ಧಗೊಂಡಿರುವ ಕನ್ನಡವನ್ನು ನೂರಕ್ಕೆ ನೂರರಷ್ಟು ಅನುಷ್ಠಾನಗೊಳಿಸಲು ನಾವು ಬದ್ಧರಾಗಬೇಕಿದೆ ಎಂದು ವಾಕರಸಾ ಸಂಸ್ಥೆಯ ಹುಬ್ಬಳ್ಳಿ ಕೇಂದ್ರ ಕಚೇರಿಯ ಮುಖ್ಯ ಕಾರ್ಮಿಕ ಕಲ್ಯಾಣ ಅಧಿಕಾರಿ ಪಿ.ವೈ. ನಾಯಕ ಅಭಿಪ್ರಾಯಪಟ್ಟರು.
ಅವರು ಶನಿವಾರ ಗದುಗಿನ ಕುಮಾರೇಶ್ವರ ಪಾಠಶಾಲೆಯ ಸಭಾಭವನದಲ್ಲಿ ಗದಗ ವಿಭಾಗದ ವಾ.ಕ.ರ.ಸಾ ಸಂಸ್ಥೆಯ ಕನ್ನಡ ಕ್ರಿಯಾ ಸಮಿತಿ ಕರ್ನಾಟಕ ರಾಜ್ಯೋತ್ಸವ ಸಂಭ್ರಮದ ಅಂಗವಾಗಿ ಏರ್ಪಡಿಸಿದ್ದ `ಕರುನಾಡು ಸಾಂಸ್ಕೃತಿಕ ಉತ್ಸವ’ವನ್ನು ಉದ್ಘಾಟಿಸಿ ಮಾತನಾಡಿದರು.
ಸಾರಿಗೆ ಸಂಸ್ಥೆಯು ತನ್ನ ಆಡಳಿತ ಸಂಪರ್ಕ ವ್ಯವಹಾರದಲ್ಲಿ ಶೇ. ನೂರಕ್ಕೆ ನೂರರಷ್ಟು ಕನ್ನಡವನ್ನು ಅಳವಡಿಸಿಕೊಂಡಿದೆ. ಇದರೊಟ್ಟಿಗೆ ವಾಕರಸಾ ಸಂಸ್ಥೆಯ ಕನ್ನಡ ಕ್ರಿಯಾ ಸಮಿತಿಯೂ ಸಾಥ್ ನೀಡುತ್ತಿದ್ದು, ಕನ್ನಡ ಅನುಷ್ಠಾನ ಸಮಿತಿಯೂ ಸಹ ಈ ಕುರಿತು ನಿಗಾ ವಹಿಸಿದೆ ಎಂದರು.
ಬೆಳಗಾವಿ ಭಾಗದಲ್ಲಿ ಕನ್ನಡ ಭಾಷೆಯ ಮೇಲೆ ಮರಾಠಿ ಭಾಷೆ ಕೊಂಚ ಪ್ರಭಾವ ಬೀರುವ ಹಾಗೆ ಗದಗ ಪರಿಸರದಲ್ಲಿ ಆ ರೀತಿಯ ಪ್ರಭಾವ ಇಲ್ಲ. ಹೀಗಾಗಿ ಗದಗ ಜಿಲ್ಲೆಯಲ್ಲಿ ಕನ್ನಡ ಭಾಷೆ ತನ್ನ ಹೊಳಪನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುತ್ತಿದೆ. ಸಂಸ್ಥೆಯಲ್ಲಿ ಕನ್ನಡ ಕ್ರಿಯಾ ಸಮಿತಿಯ ಕ್ರಿಯಾಶೀಲತೆಯ ಸಾಹಿತ್ಯಿಕ ಕಾರ್ಯ ಚಟುವಟಿಕೆಗಳು ಭಾಷೆಯ ಸಮೃದ್ಧಿಯನ್ನು ದ್ವಿಗುಣಗೊಳಿಸುತ್ತಿದೆ. ಈ ಕಾರಣಕ್ಕಾಗಿ ಸಮಿತಿಯ ಕ್ರಿಯಾಶೀಲ ಪದಾಧಿಕಾರಿಗಳು, ಕನ್ನಡ ಮನಸ್ಸುಗಳು ಅಭಿನಂದನಾರ್ಹರು ಎಂದರು.
ಗದಗ ವಿಭಾಗವು ಕರ್ನಾಟಕ ರಾಜ್ಯೋತ್ಸವ, ಗಣರಾಜ್ಯೋತ್ಸವ, ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಸ್ತಬ್ಧ ಚಿತ್ರ, ಅಲಂಕೃತ ವಾಹನದ ರೂಪಕಗಳು ಜಿಲ್ಲಾಡಳಿತದ ಮೆಚ್ಚುಗೆ ಪಾತ್ರವಾಗಿರುವದು ಶ್ಲಾಘನೀಯ. ಅದಕ್ಕೆ ಶ್ರಮಿಸಿದ ಸಂಸ್ಥೆಯ ತಂತ್ರಜ್ಞ ಕಲಾವಿದರು ಅಭಿನಂದನಾರ್ಹರು. ಸಂಸ್ಥೆಯ ಸಿಬ್ಬಂದಿ ಸಂಗೀತ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯ ಚಟುವಟಿಕೆಗಳಲ್ಲೂ ಮುಂಚೂಣಿಯಲ್ಲಿರುವದು ಸಂಸ್ಥೆಯ ಹಿರಿಯೆಯನ್ನು ಹೆಚ್ಚಿಸಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಗದಗ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಡಿ.ಎಂ. ದೇವರಾಜ ವಹಿಸಿದ್ದರು. ವಿಶೇಷ ಆಹ್ವಾನಿತರಾಗಿ ಕನ್ನಡ ಕ್ರಿಯಾ ಸಮಿತಿಯ ಹುಬ್ಬಳ್ಳಿ ವಲಯ ಅಧ್ಯಕ್ಷ ಗಂಗಾಧರ ಕಮಲದಿನ್ನಿ ಆಗಮಿಸಿದ್ದರು.
ವೇದಿಕೆಯ ಮೇಲೆ ಕಿರಣಕುಮಾರ ಬಸಾಪೂರ, ವಿಜಯಕುಮಾರ ಕುಮಠಳ್ಳಿ, ಆರ್.ಎಲ್. ಕಾಶೀಗೌಡ್ರ, ಬಿ.ಎಲ್. ಗೆಣ್ಣೂರ, ರಿಟಾ ಮಿರಜಕರ, ಮಲ್ಲಿಕಾರ್ಜುನ ಬುಡಕನಹಳ್ಳಿ, ಮಲ್ಲಿಕಾರ್ಜುನ ನವಲಗುಂದ, ಕಾರ್ಮಿಕ ಮುಖಂಡರಾದ ಶಾಂತಣ್ಣ ಮುಳವಾಡ, ಬಿ.ಎಚ್. ರಾಮೇನಹಳ್ಳಿ, ಎಂ.ಆAಜನೇಯ, ಎಚ್.ಸಿ. ಕೊಪ್ಪಳ, ಎಂ.ಎಚ್. ಪೂಜಾರ, ಆಂಜನೇಯ ಕುಂಬಾರ, ವಿಭಾಗದ ಎಲ್ಲ ಘಟಕಗಳ ಘಟಕ ವ್ಯವಸ್ಥಾಪಕರು ಉಪಸ್ಥಿತರಿದ್ದರು.