ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಅಬ್ಬಿಗೇರಿಯ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ 26 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದುಕೊಂಡಿರುವುದು ಹೆಮ್ಮೆಯ ಸಂಗತಿ ಎಂದು ಶಾಸಕ ಜಿ.ಎಸ್. ಪಾಟೀಲ ಸಂತಸ ವ್ಯಕ್ತಪಡಿಸಿದರು.
ಸಮೀಪದ ಅಬ್ಬಿಗೇರಿ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ತಲಾ 10 ಸಾವಿರ ರೂ. ಮೊತ್ತದ ಚೆಕ್ ವಿತರಣೆ, 6ನೇ ತರಗತಿ ಮಕ್ಕಳ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಾಲ್ಕೈದು ವರ್ಷಗಳ ಹಿಂದೆ ರೋಣ ಪಟ್ಟಣದ ಗುಲಗಂಜಿ ಮಠದಲ್ಲಿ ಇದ್ದ ವಸತಿ ನಿಲಯ ಇಂದು ಸುಸಜ್ಜಿತ ಕಟ್ಟಡದಲ್ಲಿ ಶಿಕ್ಷಣ ನೀಡುತ್ತಿದೆ. ಈ ಕಟ್ಟಡ ನಿರ್ಮಾಣದಲ್ಲಿ ಹಲವು ಮಹನೀಯರ ಶ್ರಮ ಅಡಗಿದೆ. ಇಂದು ಎಲ್ಲರನ್ನೂ ನೆನೆಯುವ ಕಾಲ ಬಂದಿದೆ ಎಂದರು.
ಪದವಿಪೂರ್ವ ಕಾಲೇಜು ಪ್ರಾಚಾರ್ಯ ಜಿ.ಎಲ್. ನಾಗರಾಜ ಮಾತನಾಡಿ, ನಮ್ಮ ವಸತಿ ಶಾಲೆಯ ಕಾಲೇಜು ಇಡೀ ರಾಜ್ಯದಲ್ಲೇ 7ನೇ ಸ್ಥಾನ ಪಡೆದುಕೊಂಡಿದೆ. ಪಿಯುಸಿ ಫಲಿತಾಂಶ ಶೇ. 100ರಷ್ಟಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ವಿ.ಬಿ. ಸೋಮನಕಟ್ಟಿಮಠ, ಅಬ್ಬಿಗೇರಿಯ ಪ್ರೊ. ಬಸವರಾಜ ಪಲ್ಲೇದ ಮಾತನಾಡಿದರು. ಉಪಪ್ರಾಚಾರ್ಯ ಧೃವಕುಮಾರ ಮೆಣಸಿನಕಾಯಿ, ಅಬ್ಬಿಗೇರಿ ಗ್ರಾ.ಪಂ ಉಪಾಧ್ಯಕ್ಷೆ ಜ್ಯೋತಿ ತೆಗ್ಗಿನಕೇರಿ, ಸದಸ್ಯರಾದ ರೇಖಾ ಅವರೆಡ್ಡಿ, ಬಸವರಾಜ ಕಮ್ಮಾರ, ಅಕ್ಕಮ್ಮ ಡೊಳ್ಳಿನ, ವಿಜಯಲಕ್ಷ್ಮೀ ಬಸವರೆಡ್ಡೇರ, ಯೂಸುಫ್ ಇಟಗಿ, ಬಸವರಾಜ ತಳವಾರ, ಹನಮಂತಪ್ಪ ದ್ವಾಸಲ್, ಬಸವರಾಜ ನವಲಗುಂದ, ಡಿ.ಎಚ್. ಅಣ್ಣಿಗೇರಿ, ಗುರಣ್ಣ ಅವರೆಡ್ಡಿ ಹಾಗೂ ವಸತಿ ಶಾಲೆ ಸಿಬ್ಬಂದಿಗಳು ಇದ್ದರು.
ಮುಂಬರುವ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸಲು ಶಿಕ್ಷಕರು ನೆರವಾಗಬೇಕು. ಎಲ್ಲ ವಿದ್ಯಾರ್ಥಿಗಳನ್ನು ವಾರ್ಷಿಕ ಪರೀಕ್ಷೆಗೆ ಸಿದ್ಧಗೊಳಿಸಬೇಕು. ಅಬ್ಬಿಗೇರಿಯ ಈ ವಸತಿ ಶಾಲೆ ಉತ್ತಮ ವಾತಾವರಣ ಹೊಂದಿದೆ. ಶಾಲೆಗೆ ಬೇಕಾದ ಮೂಲ ಸೌಲಭ್ಯ ಒದಗಿಸಲು ಬದ್ಧನಾಗಿದ್ದೇನೆ ಎಂದು ಶಾಸಕ ಜಿ.ಎಸ್. ಪಾಟೀಲ ಭರವಸೆ ನೀಡಿದರು.