ವಿಜಯಸಾಕ್ಷಿ ಸುದ್ದಿ, ಗದಗ : ರೋಣ ತಾಲೂಕಿನಲ್ಲಿ ಅತಿ ಹೆಚ್ಚು ಮಾನವ ದಿನಗಳ ಸೃಜನೆ ಮಾಡುವ ಪಂಚಾಯತಿಯಲ್ಲಿ ಅಬ್ಬಿಗೇರಿ ಮೊದಲನೇ ಸ್ಥಾನದಲ್ಲಿದೆ. ಹಿಂದಿನ ವರ್ಷದಂತೆ ಈ ಬಾರಿಯೂ 2024-25ನೇ ಸಾಲಿನಲ್ಲಿ ಎಪ್ರಿಲ್ 1ನೇ ವಾರದಿಂದ ಸಮುದಾಯ ಕಾಮಗಾರಿ ಆರಂಭವಾಗುತ್ತಿದ್ದು, ದುಡಿಯುವ ಕೈಗಳಿಗೆ ಉದ್ಯೋಗ ನೀಡುವ ಮೂಲಕ ಗ್ರಾಮೀಣ ಜನರ ಜೀವನಮಟ್ಟ ಸುಧಾರಿಸುವ ಜೊತೆಗೆ ಗುಣಮಟ್ಟದ ಕೆಲಸ ನಿರ್ವಹಿಸುವಂತೆ ರೋಣ ತಾ.ಪಂ ಸಹಾಯಕ ನಿರ್ದೇಶಕ (ಗ್ರಾ.ಉ) ರಿಯಾಜ ಖತೀಬ್ ಹೇಳಿದರು.
ಅಬ್ಬಿಗೇರಿ ಗ್ರಾಮ ಪಂಚಾಯಿತಿಯಲ್ಲಿ ಸೋಮವಾರ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಪೂರ್ವಭಾವಿಯಾಗಿ ಆಯೋಜಿಸಿದ್ದ ಕಾಯಕ ಬಂಧುಗಳ ಸಭೆಯಲ್ಲಿ ಅವರು ಮಾತನಾಡಿದರು.
ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಎಪ್ರಿಲ್‌ನಲ್ಲಿ ಅಬ್ಬಿಗೇರಿ ಗ್ರಾಮದಲ್ಲಿ ಕೂಲಿಕಾರರ ಬೇಡಿಕೆ ಆಧರಿಸಿ ನಮೂನೆ-6 ಪಡೆಯುವ ಮೂಲಕ ಉದ್ಯೋಗ ಪ್ರಾರಂಭಿಸಲಿದ್ದು, ಕಾಯಕ ಬಂಧುಗಳಾದ ನೀವೆಲ್ಲರೂ ಕೂಲಿಕಾರರ ಆಧಾರ್ ಸಂಖ್ಯೆಗೆ ಬ್ಯಾಂಕ್ ಖಾತೆ ಸಂಖ್ಯೆ ಲಿಂಕ್ ಹಾಗೂ ಉದ್ಯೋಗ ಚೀಟಿ ಎನ್.ಸಿ.ಪಿ.ಐ ಲಿಂಕ್ ಕಡ್ಡಾಯವಾಗಿ ಮಾಡಿಸಬೇಕಾಗುತ್ತದೆ. ಇಲ್ಲದೇ ಹೋದಲ್ಲಿ ಹಣ ಜಮಾ ಆಗುವುದಿಲ್ಲ. ಅದಕ್ಕೆ ಕೆಲಸ ಮಾಡಿದ ಕೂಲಿಕಾರಿಗೆ ಅನ್ಯಾಯವಾಗುತ್ತದೆ. ಈ ಹಿನ್ನೆಲೆಯಲ್ಲಿ ತಮ್ಮೆಲ್ಲರ ಸಹಕಾರ ಅಗತ್ಯ ಎಂದರು.
ಕೆಲಸದ ಸ್ಥಳಗಳಲ್ಲಿ ಕೂಲಿಕಾರರಿಗೆ ಪ್ರಥಮ ಚಿಕಿತ್ಸೆ, ನೆರಳು, ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಆರು ತಿಂಗಳಿಂದ ಮೂರು ವರ್ಷದ ಮಕ್ಕಳಿಗೆ ಗ್ರಾ.ಪಂ.ನಿದ ಕೂಸಿನ ಮನೆ ಆರಂಭ ಮಾಡಿದ್ದು, ತಮ್ಮ ಮಕ್ಕಳನ್ನು ಅಲ್ಲಿಯೇ ಬಿಟ್ಟಿಹೋಗಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿ.ಎಫ್.ಟಿ, ಜಿ.ಕೆ.ಎಂ, ಕಾಯಕ ಬಂಧುಗಳು ಮತ್ತು ಪಂಚಾಯತ ಸಿಬ್ಬಂದಿಗಳು ಹಾಜರಿದ್ದರು.
ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಲೋಹಿತ.ಎಮ್ ಮಾತನಾಡಿ, ಕೆಲಸದ ಸ್ಥಳದಲ್ಲಿ ಕೂಲಿಕಾರರ ಹಾಜರಾತಿಯನ್ನು ಎರಡು ಹಂತದಲ್ಲಿ ಎನ್.ಎಂ.ಎಂ.ಎಸ್ ಆ್ಯಪ್‌ನಲ್ಲಿ ಸೆರೆ ಹಿಡಿಯಬೇಕು. ಕೂಲಿಕಾರರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಎಬಿಪಿಎಸ್ ಆಗದೇ ಇರುವ ಕೂಲಿಕಾರರು ಕೂಡಲೇ ಎಬಿಪಿಎಸ್ ಮತ್ತು ಎನ್.ಸಿ.ಪಿ.ಐ ಲಿಂಕ್ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.