ಬೆಂಗಳೂರು: ನಾನ್ ಕನ್ನಡಿಗ ಹೆಚ್‌ಆರ್ ಅಭ್ಯರ್ಥಿಯೇ ಬೇಕು ಎಂದು ಉದ್ಯೋಗ ಪ್ರಕಟಣೆ ಹೊರಡಿಸಿ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದ ಖಾಸಗಿ ಕಂಪನಿ ಇದೀಗ ಸಾರ್ವಜನಿಕವಾಗಿ ಕ್ಷಮೆಯಾಚನೆ ಮಾಡಿಕೊಂಡಿದೆ.
ಸ್ಕಿಲ್ ಸೋನಿಕ್ಸ್ (Skill Sonics) ಎಂಬ ಕಂಪನಿ ನೌಕರಿ ಡಾಟ್ ಕಾಮ್‌ನಲ್ಲಿ ನಾನ್ ಕನ್ನಡಿಗ ಹೆಚ್‌ಆರ್ ಅಗತ್ಯ ಎಂಬ ರೀತಿಯ ಪ್ರಕಟಣೆ ನೀಡಿತ್ತು. ಈ ವಿಷಯ ಬೆಳಕಿಗೆ ಬಂದ ಕೂಡಲೇ ಕನ್ನಡಿಗರಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಯಿತು.
ಜೆಪಿ ನಗರದ ಸಂಸ್ಥೆಯ ವಿರುದ್ಧ ಕನ್ನಡ ಸಂಘಟನೆಗಳು ಪ್ರತಿಭಟನೆಗೆ ಸಜ್ಜಾಗಿದ್ದವು. ಸಾಮಾಜಿಕ ಜಾಲತಾಣಗಳಲ್ಲಿಯೂ ಈ ನೇಮಕಾತಿ ಪ್ರಕಟಣೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು.
ವಿಷಯ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಂತೆ ಎಚ್ಚೆತ್ತ ಕಂಪನಿ ಮ್ಯಾನೇಜರ್, ಇದು ಕೋಲ್ಕತ್ತಾ ವಿಭಾಗದಿಂದ ನಡೆದ ಅಚಾತುರ್ಯ ಎಂದು ಸ್ಪಷ್ಟನೆ ನೀಡಿದರು. ವಿವಾದ ಸೃಷ್ಟಿಸಿದ ನೇಮಕಾತಿ ಪ್ರಕಟಣೆಯನ್ನು ರದ್ದುಪಡಿಸಿರುವುದಾಗಿ ತಿಳಿಸಿ, ಕನ್ನಡಿಗರ ಭಾವನೆಗಳಿಗೆ ಧಕ್ಕೆ ಉಂಟಾದರೆ ಕ್ಷಮೆ ಇರಲಿ ಎಂದು ಕೈಮುಗಿದು ಕ್ಷಮೆಯಾಚಿಸಿದ್ದಾರೆ.



