ದಾವಣಗೆರೆ: ದಾವಣಗೆರೆ ಶಾಸಕ ಬಿಪಿ ಹರೀಶ್ ಎಸ್ಪಿ ಉಮಾ ಪ್ರಶಾಂತ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಆರೋಪ ಹಿನ್ನಲೆ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸಚಿವ ಎಸ್.ಎಸ್.ಮಲ್ಲಿಕಾರ್ಜುನ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ಶಾಸಕ ಬಿ.ಪಿ.ಹರೀಶ್ ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್ರನ್ನು ಪೊಮೇರಿಯನ್ ನಾಯಿಗೆ ಹೋಲಿಸಿದ್ದರು.
ಈ ವಿವಾದಾತ್ಮಕ ಹೇಳಿಕೆ ವಿರುದ್ಧ ಇದೀಗ ಕಾನುನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಶಾಸಕ ಬಿ.ಪಿ ಹರೀಶ್ರವರ ಈ ಹೇಳಿಕೆಯನ್ನು ಎಸ್ಪಿ ಉಮಾ ಪ್ರಶಾಂತ್ ಖಂಡಿಸಿದ್ದು, ಕೆಟಿಜೆ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದೀಗ ಮಹಿಳಾ ಆಯೋಗಕ್ಕೆ ದೂರು ನೀಡುವ ಸಾಧ್ಯತೆಯೂ ಇದೆ.
ಎಸ್ಪಿ ಉಮಾ ಪ್ರಶಾಂತ್ ಅವರ ದೂರಿನ ಆಧಾರದ ಮೇಲೆ, ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಶಾಸಕ ಬಿ.ಪಿ. ಹರೀಶ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 132 (ಸಾರ್ವಜನಿಕ ಸೇವಕನ ಕರ್ತವ್ಯಕ್ಕೆ ಅಡ್ಡಿಪಡಿಸುವ ದಾಳಿ), 351(2) (ಕ್ರಿಮಿನಲ್ ಬೆದರಿಕೆ), ಮತ್ತು 79 (ಮಹಿಳೆಯ ಗೌರವಕ್ಕೆ ಧಕ್ಕೆ ತರುವ ಕೃತ್ಯ) ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.
ಸದ್ಯ ಶಾಸಕರ ಆಕ್ಷೇಪಾರ್ಹ ಹೇಳಿಕೆಗೆ ಎಫ್ಐಆರ್ ದಾಖಲಾಗಿದೆ. ಈ ಕಾರಣಕ್ಕೆ ನಿನ್ನೆ ರಾತ್ರಿ ದಾವಣಗೆರೆ ನಗರದ ಕೆಟಿಜೆ ಪೊಲೀಸ್ ಠಾಣೆಯ ಸಿಬ್ಬಂದಿ ದಾವಣಗೆರೆ ನಗರದ ವಿಶ್ವೇಶ್ವಯ್ಯ ಪಾರ್ಕ ಬಳಿ ಇರುವ ಶಾಸಕ ಬಿಪಿ ಹರೀಶ್ ಮನೆಗೆ ಭೇಟಿ ನೀಡಿದ್ದರು. ಶಾಸಕರು ಬೆಂಗಳೂರಿಗೆ ತೆರಳಿದ್ದರು. ಪೊಲೀಸ್ ಠಾಣೆಗ ಬಂದು ವಿಚಾರಣೆ ಹಾಜರಾಗಿ ಎಂದು ಮೌಖಿತವಾಗಿ ಪೊಲೀಸರು ಹರೀಶ್ ಪತ್ನಿ ಹಾಗೂ ಪುತ್ರನಿಗೆ ಹೇಳಿದ್ದಾರೆ.