ವಿಜಯಸಾಕ್ಷಿ ಸುದ್ದಿ, ಗದಗ: ಜೀವನಲ್ಲಿ ನಾವು ಎಂಥಹುದೇ ಸಾಧನೆ ಮಾಡಲಿ, ಯಾವುದೇ ಕಾರ್ಯಗಳನ್ನು ಮಾಡಲಿ, ನಮ್ಮ ಭವ್ಯ ಭವಿಷ್ಯತ್ತಿಗೆ ಗುರುವಿನ ಕರುಣೆ ಅತ್ಯವಶ್ಯ ಎಂದು ನಿವೃತ್ತ ಗುರುಮಾತೆ, ಆಧ್ಯಾತ್ಮ ಚಿಂತಕಿ ರತ್ನಾ ಗಾರ್ಗಿ ಅಭಿಪ್ರಾಯಪಟ್ಟರು.
ಶ್ರೀ ಗುರುಮೃತ್ಯುಂಜಯ ಸೇವಾ ಸಮಿತಿ ಗದಗ, ಸೌಹಾರ್ದ ಮಹಾಮನೆ ವೇದಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ನಗರದ ಲಖಾಣಿ ಆಸ್ಪತ್ರೆ ಎದುರಿಗಿನ ಶ್ರೀ ಮೃತ್ಯುಂಜಯ ಗುರುಕುಲ ಆಶ್ರಮದಲ್ಲಿ ಏರ್ಪಡಿಸಿದ್ದ `ಸಂಸ್ಕೃತಿ ಸಂಭ್ರಮ’ ಕಾರ್ಯಕ್ರಮದ ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ನಿರ್ಮಲಾ ವಿವಿಧೋದ್ದೇಶ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ನಿರ್ಮಲಾ ತರವಾಡೆ ಹಾಗೂ ಕಪ್ಪತ್ತಗಿರಿ ಸಾಹಿತ್ಯ ಸಂಸ್ಕೃತಿ ವೇದಿಕೆ ಸಂಸ್ಥಾಪಕ ಅಧ್ಯಕ್ಷರಾದ ಚಂದ್ರಕಲಾ ಇಟಗಿಮಠಮಾತನಾಡಿದರು.
ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ ಕವಿಗಳಾದ ಹಿರೇಹಂದಿಗೋಳದ ಶಿವಶಂಕ್ರಪ್ಪ ಆರಟ್ಟಿ ಮಾತನಾಡಿ, ಮಣಕವಾಡದ ಶ್ರೀ ಮೃತ್ಯುಂಜಯ ಮಹಾಸ್ವಾಮಿಗಳ ಜೀವನಶೈಲಿ ಮತ್ತು ಪವಾಡಗಳನ್ನು ವಿವರಿಸಿ, ಕವಿಗಳು ಆಧ್ಯಾತ್ಮದಲ್ಲಿ ಆಸಕ್ತಿ ಹೊಂದಿದರೆ ಕವಿತ್ವಕ್ಕೆ ಬಹುದೊಡ್ಡ ಬೆಲೆ ಬರುತ್ತದೆ ಎಂದರು.
ಸಂಸ್ಕೃತಿ ಸಂಭ್ರಮದ ಸಂಚಾಲಕರಾದ ಪ್ರೊ. ಬಸವರಾಜ ನೆಲಜೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಗೀತ ಶಿಕ್ಷಕ ಪ್ರದೀಪ ಕುಮಾರ ನರ್ತಿ ಹಾಗೂ ತಂಡದವರಿAದ ಸಂಗೀತ ಕಾರ್ಯಕ್ರಮ ಜರುಗಿತು. ಮುತ್ತು ಹೂಗಾರ ಸ್ವಾಗತಿಸಿದರು. ಸುಮಾರು ಇಪ್ಪತ್ತು ಕವಿಗಳು ಕವನವಾಚನ ಮಾಡಿದರು. ಶಿವಾನಂದ ಭಜಂತ್ರಿ ಕಾರ್ಯಕ್ರಮ ನಿರೂಪಿಸಿದರು. ಪ್ರವಾಸೋದ್ಯಮ ಇಲಾಖೆಯ ಎಂ.ಡಿ. ದೊಡ್ಡಮನಿ, ರಾಯಪ್ಪ ನಾಗನೂರ, ಮೃತ್ಯುಂಜಯ ಹಟ್ಟಿ, ಸುರೇಶ ಹೂಗಾರ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸೌಹಾರ್ದ ಮಹಾಮನೆ ವೇದಿಕೆಯ ಅಧ್ಯಕ್ಷರು, ಹಿರಿಯ ಸಾಹಿತಿಗಳಾದ ಐ.ಕೆ. ಕಮ್ಮಾರ ಮಾತನಾಡಿ, ಗುರು-ಹಿರಿಯರನ್ನು ಗೌರವಿಸುವ ಗುಣ ಇರುವಾತ ಮಾತ್ರ ಜೀವನದಲ್ಲಿ ಸುಖ-ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತದೆ. ಅಂತಹ ಮನಸ್ಥಿತಿ ನಮ್ಮದಾಗಲು ಉತ್ತಮ ಸಂಸ್ಕಾರ ಬೇಕು. ಅಂತಹ ವ್ಯಕ್ತಿಗಳಿಗೆ ಬದುಕಿನಲ್ಲಿ ದುಃಖವೇ ಇರುವುದಿಲ್ಲ. ಮೊಬೈಲ್ ಮತ್ತು ಟಿ.ವ್ಹಿಯ ವ್ಯಾಮೋಹದಿಂದ ಮೂಲ ಸಂಸ್ಕೃತಿಗೆ ಧಕ್ಕೆಯಾಗುವ ನಿಟ್ಟಿನಲ್ಲಿ ಯುವಕರು ನಡೆದುಕೊಳ್ಳುವುದು ಹೆಚ್ಚಾಗುತ್ತಿದೆ. ಇದರಿಂದ ತಮ್ಮ ಭವಿಷ್ಯವನ್ನು ಯುವ ಜನಾಂಗ ತಾವೇ ಹಾಳು ಮಾಡಿಕೊಳ್ಳುವುದು ಇತ್ತೀಚಿಗೆ ಹೆಚ್ಚಾಗಿದೆ ಎಂದು ವಿಷಾದಿಸಿದರು.