ವೆಂಕಟನಾಥರು ಒಮ್ಮೆ ಕುಂಭಕೋಣ ಪ್ರವಾಸ ಮಾಡುತ್ತಿದ್ದಾಗ ವೆಂಕಟನಾಥ ಮತ್ತು ಅವರ ಪತ್ನಿ ಸರಸ್ವತಿ ಬಾಯಿಯವರಿಗೆ ಸಮಾರಂಭಕ್ಕೆ ಆಹ್ವಾನಿಸಲಾಯಿತು. ಆದರೆ ವೆಂಕಟನಾಥರಿಗೆ ಸರಿಯಾದ ಗೌರವಾದರಗಳನ್ನು ಮಾಡದೇ ಆ ಸಮಾರಂಭದಲ್ಲಿ ಶ್ರೀಗಂಧವನ್ನು ತೇಯುವ ಕೆಲಸವನ್ನು ವಹಿಸುತ್ತಾರೆ. ಆದರೆ ವೆಂಕಟನಾಥರು ಭಗವಂತನ ಸಂಕಲ್ಪದಿಂದ ಅಗ್ನಿ ಸೂಕ್ತ ಪಠಿಸುತ್ತ ಗಂಧವನ್ನು ತೇಯ್ದರು. ಆ ಗಂಧ ಲೇಪಿಸಿಕೊಂಡ ವಿಪ್ರರಿಗೆಲ್ಲ ಮೈ ಉರಿ ಶುರುವಾಯಿತು. ಅದಕ್ಕೆ ಕಾರಣವನ್ನು ಹುಡುಕಲಾಗಿ ಗಂಧ ತೇಯುವವರು ಮಹಾನ್ ವ್ಯಕ್ತಿಗಳಾಗಿದ್ದು, ಅವರಿಗೆ ಮಂತ್ರ ಸಿದ್ಧಿಯಾಗಿದೆ. ಅವರು ಅಗ್ನಿ ಸೂಕ್ತ ಪಠಿಸಿದ್ದರಿಂದ ಈ ತರಹದ ಉರಿ ಶುರುವಾಗಿದೆ ಎಂದು ತಿಳಿದು ಬಂದಿತು. ಆಗ ಗೃಹಸ್ಥರು ತಮ್ಮಿಂದ ಅಪರಾಧವಾಗಿದ್ದು ಕ್ಷಮಿಸಬೇಕೆಂದು ವೆಂಕಟನಾಥರಲ್ಲಿ ಬೇಡಿಕೊಂಡರು. ವೆಂಕಟನಾಥರು ಸ್ವಲ್ಪವೂ ಬೇಸರ ಮಾಡಿಕೊಳ್ಳದೇ ಪುನಃ ಶ್ರೀ ಹರಿಯನ್ನು ಸ್ಮರಣೆ ಮಾಡುತ್ತಾ ವರುಣ ಸೂಕ್ತ ಪಠಿಸಿದಾಗ ಎಲ್ಲರ ಉರಿ ಶಮನವಾಯಿತು. ಇದು ವೆಂಕಟನಾಥರಲ್ಲಿಯ ಮಂತ್ರ ಸಿದ್ಧಿ ಹಾಗೂ ಸಹಾನುಭೂತಿಗೆ ಒಂದು ನಿದರ್ಶನವಾಗಿದೆ.
ಈ ವೆಂಕಟನಾಥರೇ ಮುಂದೆ ಶ್ರೀ ಸುಧೀಂದ್ರ ತೀರ್ಥರಿಂದ ಸನ್ಯಾಸತ್ವ ಸ್ವೀಕರಿಸಿ ರಾಘವೇಂದ್ರ ಸ್ವಾಮಿಗಳಾದರು. ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಪೂರ್ವಾಶ್ರಮದ ಹೆಸರು ವೆಂಕಟನಾಥ. ತಂದೆ ತಿಮ್ಮಣ್ಣ ಭಟ್ಟರು, ತಾಯಿ ಗೋಪಿಕಾಂಬೆ. ತಿಮ್ಮಣ್ಣ ಭಟ್ಟರಿಗೆ ಗುರುರಾಜ, ವೆಂಕಟಾಂಬೆ, ವೆಂಕಟನಾಥ ಎಂಬ ಮಕ್ಕಳು ಜನಿಸಿದರು. ವೆಂಕಟನಾಥರು 1595ರಲ್ಲಿ ಈಗಿನ ತಮಿಳುನಾಡಿನ ಭುವನಗಿರಿ ಎಂಬಲ್ಲಿ ಹಿಂದೂ ಧರ್ಮದ ಬ್ರಾಹ್ಮಣ ಮಾಧ್ವ ಸಂಪ್ರದಾಯದಲ್ಲಿ ಜನಿಸಿದರು. ಇವರು ಮಧ್ವಾಚಾರ್ಯರ ಅನುಯಾಯಿಗಳಾಗಿ ಮಧ್ವ ಮತದ ದ್ವೆöÊತ ಸಿದ್ಧಾಂತವನ್ನು ಪ್ರತಿಪಾದಿಸಿದರು.
ಶ್ರೀ ಸುಧೀಂದ್ರ ತೀರ್ಥರು ವೇದಾಂತ ಸಾಮ್ರಾಜ್ಯಕ್ಕೆ ತಕ್ಕಂತಹ ಉತ್ತರಾಧಿಕಾರಿಯನ್ನು ಹುಡುಕುತ್ತಿರುವಾಗ, ಅವರ ಕನಸಿನಲ್ಲಿ ಶ್ರೀಮೂಲರಾಮದೇವರೇ ಬಂದು ವೆಂಕಟನಾಥರನ್ನು ಶಿಷ್ಯರಾಗಿ ಸ್ವೀಕರಿಸುವಂತೆ ಸೂಚಿಸಿದರು. ಈ ವಿಷಯವನ್ನು ಶ್ರೀ ಸುಧೀಂದ್ರ ತೀರ್ಥರು ವೆಂಕಟನಾಥರಿಗೆ ತಿಳಿಸಿದಾಗ, ವೆಂಕಟನಾಥರು ನಕಾರಾತ್ಮಕ ಉತ್ತರ ಕೊಟ್ಟರು. ಅದರೆ ವೆಂಕಟನಾಥರಿಗೆ ಸಾಕ್ಷಾತ್ ಸರಸ್ವತೀ ದೇವಿಯೇ ಬಂದು ಸನ್ಯಾಸಾಶ್ರಮವನ್ನು ಸ್ವೀಕರಿಸುವಂತೆ ಆಜ್ಞೆಯಿತ್ತಳು.
ಇದರಿಂದ ಮನಸ್ಸನ್ನು ಬದಲಿಸಿದ ವೆಂಕಟನಾಥರು ಸನ್ಯಾಸಾಶ್ರಮ ಸ್ವೀಕರಿಸಿದರು. ಫಾಲ್ಗುಣ ಶುದ್ಧ ಬಿದಿಗೆಯಂದು ತಂಜಾವೂರಿನಲ್ಲಿ ರಘುನಾಥಭೂಪಾಲನ ಹಾಗೂ ಆಗಿನ ಶ್ರೇಷ್ಠರಾದ ಅನೇಕ ಜನವಿದ್ವಾಂಸರು, ಆಚಾರ್ಯರ ಸಮ್ಮುಖದಲ್ಲಿ ಶ್ರೀ ಸುಧೀಂದ್ರತೀರ್ಥರು ಸಂನ್ಯಾಸಾಶ್ರಮವನ್ನು ನೀಡಿ, ಶ್ರೀ ರಾಘವೇಂದ್ರ ತೀರ್ಥರೆಂಬ ಅದ್ಭುತವಾದ ಹೆಸರಿನಿಂದ ನಾಮಕರಣವನ್ನು ಮಾಡಿ, ಪ್ರಣವ ಮಂತ್ರೋಪದೇಶಪೂರ್ವಕವಾಗಿ ವೇದಾಂತ ಸಾಮ್ರಾಜ್ಯದಲ್ಲಿ ಪಟ್ಟಾಭಿಷೇಕವನ್ನು ನೆರವೇರಿಸಿದರು.
ತಮ್ಮ ಪತಿಯ ಸನ್ಯಾಸಾಶ್ರಮದ ಸುದ್ದಿ ತಿಳಿಯುತ್ತಲೇ ಮನನೊಂದ ಪತ್ನಿ ಸರಸ್ವತಿಬಾಯಿ ಬಾವಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡು ಪಿಶಾಚಿ ಜನ್ಮ ತಾಳಿ ಶ್ರೀರಾಘವೇಂದ್ರ ಸ್ವಾಮಿಗಳಿದ್ದಲ್ಲಿಗೆ ಬಂದರು. ಆಕೆಯ ದುರವಸ್ಥೆಯನ್ನು ನೋಡಿ ಶ್ರೀ ರಾಘವೇಂದ್ರತೀರ್ಥರು ಕರುಣೆಯಿಂದ ಆಕೆಯ ಮೇಲೆ ತೀರ್ಥವನ್ನು ಸಂಪ್ರೋಕ್ಷಿಸಿ ಆಕೆಗೆ ಪಿಶಾಚಿ ಜನ್ಮದಿಂದ ಮೋಕ್ಷ ದೊರೆಯುವಂತೆ ಮಾಡಿಕೊಟ್ಟರು.
ಗದಗ ಜಿಲ್ಲೆಯ ಕಿರಟಗೇರಿಯ ದೇಸಾಯಿಯವರ ಮನೆಯಲ್ಲಿ ಪೂಜಾ ಸಮಾರಂಭವಿರುತ್ತದೆ. ರಾಯರು ಅಲ್ಲಿಗೆ ಆಗಮಿಸಿರುತ್ತಾರೆ. ಕಿರಟಗೇರಿ ದೇಸಾಯಿಯವರ ಮಗನು ಅಲ್ಲಿನ ಜನರ ಭೋಜನಕ್ಕಾಗಿ ತಯಾರಿಸಿದ ಮಾವಿನ ಹಣ್ಣಿನ ಶೀಕರಣಿಯ ದೊಡ್ಡ ಕಡಾಯಿಯಲ್ಲಿ ಬಿದ್ದು ಅಕಾಲ ಮೃತ್ಯು ಹೊಂದಿರುತ್ತದೆ. ರಾಘವೇಂದ್ರಸ್ವಾಮಿಗಳು ಆ ಮಗುವನ್ನು ತಮ್ಮ ತಪಃಶಕ್ತಿಯಿಂದ ಬದುಕಿಸುತ್ತಾರೆ. ರಾಘವೇಂದ್ರ ರಾಯರ ಅನುಗ್ರಹದಿಂದ ಬಡಬ್ರಾಹ್ಮಣನಾದ ವೆಂಕಣ್ಣನು ಅಕ್ಷರಜ್ಞಾನ ಹೊಂದಿ ಆದೋನಿಯ ಆಸ್ಥಾನದ ದಿವಾನನಾದನು.
ರಾಯರು ಸಂಚಾರ ಮಾಡುತ್ತಿದ್ದಾಗ ಆದೋನಿಯ ಪ್ರಾಂತ್ಯದ ನವಾಬನಾದ ಸಿದ್ಧಿ ಮಸೂದ್ಖಾನ್ ನವಾಬನು ರಾಘವೇಂದ್ರ ಸ್ವಾಮಿಗಳ ಪರೀಕ್ಷೆ ಮಾಡಬೇಕೆಂದೆನಿಸುತ್ತದೆ. ರಾಯರ ದರ್ಶನಕ್ಕಾಗಿ ಫಲವನ್ನು ಸ್ವೀಕಾರ ಮಾಡಬೇಕು ಎಂದು ಹೇಳಿ ತಟ್ಟೆಯಲ್ಲಿ ಮಾಂಸವನ್ನು ತಂದು ಬಟ್ಟೆ ಹೊದಿಸಿ ಈ ಫಲವನ್ನು ಸ್ವೀಕರಿಸಬೇಕು ಎಂದು ನವಾಬನು ಹೇಳಿದರು. ಆಗ ರಾಘವೇಂದ್ರ ಸ್ವಾಮಿಗಳು ಶಂಖೋದಕ ಪ್ರೋಕ್ಷಿಸಿದಾಗ ಆ ಮಾಂಸವು ಫಲ ಪುಷ್ಪಗಳಾದವು. ಇದನ್ನು ನೋಡಿದ ನವಾಬನಿಗೆ ತನ್ನ ತಪ್ಪಿನ ಅರಿವಾಗಿ ಕ್ಷಮೆ ಬೇಡಿದನು. ರಾಯರಿಗೆ ಕಾಣಿಕೆಯಾಗಿ ಕೊಡಲು ಏನನ್ನಾದರೂ ಬೇಡು ಎಂದು ನವಾಬ ತಿಳಿಸಿದರು.
ರಾಯರು ತುಂಗಭದ್ರಾ ನದಿ ತೀರದ ಮಂಚಾಲೆಯ ಕ್ಷೇತ್ರವನ್ನು ಬೇಡಿದರು. ಅದು ಬರಡು ಭೂಮಿಯಾಗಿದ್ದರಿಂದ ಬೇರೆ ಫಲವತ್ತಾದ ಭೂಮಿಯನ್ನು ಬೇಡಲು ನವಾಬನು ಕೇಳಿಕೊಳ್ಳುತ್ತಾನೆ. ಆದರೆ ರಾಯರು ಆ ಮಂಚಾಲೆ ಕ್ಷೇತ್ರವನ್ನೇ ಕೊಡಲು ತಿಳಿಸುತ್ತಾರೆ. ಯಾಕೆಂದರೆ ರಾಯರು ಪ್ರಹ್ಲಾದರಾಯರಾಗಿ ಅವತರಿಸಿದಾಗ ತಪಸ್ಸು ಮಾಡಿದ ಜಾಗ ಅದಾಗಿರುತ್ತದೆ.
1671ರಲ್ಲಿ ಶ್ರಾವಣ ಮಾಸ ಕೃಷ್ಣ ಪಕ್ಷದ ದ್ವಿತೀಯದಂದು ಶ್ರೀ ರಾಘವೇಂದ್ರ ಸ್ವಾಮಿಗಳು ಆಂಧ್ರ ಪ್ರದೇಶದ ತುಂಗಭದ್ರಾ ನದಿ ತಟದಲ್ಲಿರುವ ಮಂತ್ರಾಲಯದಲ್ಲಿ ಸಶರೀರ ವೃಂದಾವನಸ್ಥರಾದರು. ಪ್ರತಿ ವರ್ಷ ಶ್ರಾವಣ ಮಾಸ ಕೃಷ್ಣ ಪಕ್ಷ ಪಾಡ್ಯದಿಂದ ಶ್ರಾವಣ ಮಾಸ ಕೃಷ್ಣ ಪಕ್ಷ ತದಿಗೆಯವರೆಗೆ ಭವ್ಯ ಆರಾಧನೆ ನಡೆಯುತ್ತದೆ. ಇಲ್ಲಿಗೆ ನಿತ್ಯವು ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ರಾಘವೇಂದ್ರ ಸ್ವಾಮಿಗಳು ಮಧ್ವಮತಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಕರುಣಾಮಯಿಗಳಾದ ರಾಯರ ಸ್ಮರಣೆ ಮಾತ್ರದಿಂದ ಭಕ್ತರುಗಳು ತಮ್ಮ ಕಷ್ಟಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ. ರಾಯರ ಸ್ಮರಣೆ ಹಾಗೂ ಸೇವೆಯಿಂದ ಪುನೀತರಾಗೋಣ.
-
ಅಂಜನಾ ರಾಘವೇಂದ್ರ ಕುಬೇರ.
ಗದಗ.



