ಬೆಳಗಾವಿ: ಜಿಲ್ಲೆಯ ಸಕ್ಕರೆ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಬಾಯ್ಲರ್ ಸ್ಫೋಟದಲ್ಲಿ ಎಂಟು ಕಾರ್ಮಿಕರು ಮೃತಪಟ್ಟಿರುವ ಪ್ರಕರಣದಲ್ಲಿ ಕಾರ್ಖಾನೆ ಆಡಳಿತ ಮಂಡಳಿಯ ನಡೆ ಅನುಮಾನಕ್ಕೆ ಕಾರಣವಾಗಿದೆ. ಈ ದುರಂತದ ಬಳಿಕವೂ ಕಾರ್ಖಾನೆ ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಎಂಬಂತೆ ವರ್ತಿಸುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ.
ಮೃತಪಟ್ಟ ಎಂಟು ಕಾರ್ಮಿಕರ ಪೈಕಿ ಕೇವಲ ಒಬ್ಬ ಕಾರ್ಮಿಕನ ಕುಟುಂಬಕ್ಕೆ ಮಾತ್ರ ಪರಿಹಾರ ಘೋಷಿಸಿರುವ ಕಾರ್ಖಾನೆ, ಉಳಿದ ಕುಟುಂಬಗಳ ಬಗ್ಗೆ ಮೌನ ವಹಿಸಿದೆ. ಮೃತ ಮಂಜುನಾಥ ಕಾಜಗಾರ್ ಕುಟುಂಬದ ನಿರಂತರ ಒತ್ತಾಯದ ಹಿನ್ನೆಲೆ ಅವರಿಗೆ 18 ಲಕ್ಷ ರೂಪಾಯಿ ಪರಿಹಾರ ನೀಡುವ ಮೌಖಿಕ ಭರವಸೆ ನೀಡಲಾಗಿದೆ. ಆದರೆ ಇದು ಅಧಿಕೃತವಾಗಿ ಘೋಷಣೆ ಆಗಿಲ್ಲ.
ಈ ಅನ್ಯಾಯದ ವಿರುದ್ಧ ಬೈಲಹೊಂಗಲದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರೂ, ಕಾರ್ಖಾನೆ ಆಡಳಿತ ಮಂಡಳಿ ಇದುವರೆಗೆ ಸ್ಪಷ್ಟ ನಿಲುವು ಪ್ರಕಟಿಸಿಲ್ಲ. ಮಾಜಿ ಸಂಸದ ಪ್ರಭಾಕರ್ ಕೋರೆ, ಉದ್ಯಮಿ ವಿಜಯ ಮೆಟಗುಡ್ಡ ಹಾಗೂ ವಿಕ್ರಂ ಇನಾಮ್‌ದಾರ್ ಪಾಲುದಾರಿಕೆಯಲ್ಲಿರುವ ಈ ಕಾರ್ಖಾನೆ, ಮೃತರ ಕುಟುಂಬಸ್ಥರಿಗೆ ಸಾಂತ್ವನವನ್ನೂ ತಿಳಿಸದೇ ಮೌನಕ್ಕೆ ಜಾರಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.



