ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ: ರಾಜ್ಯದಲ್ಲಿ ಯೂರಿಯಾ ರಸಗೊಬ್ಬರಕ್ಕಾಗಿ ಹಾಹಾಕಾರ ಉಂಟಾಗಿದ್ದು, ಇತ್ತ ಕಾಂಗ್ರೆಸ್ ನಾಯಕರು ಸಿಎಂ ಕುರ್ಚಿಗಾಗಿ ಪೈಪೋಟಿಗೆ ಇಳಿದಿದ್ದಾರೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಕಾಂಗ್ರೆಸ್ ಸರ್ಕಾರದ ವಿರುದ್ಧ ಹಾರಿಹಾಯ್ದರು.
ಪಟ್ಟಣದಲ್ಲಿ ಬುಧವಾರ ಬಿಜೆಪಿ ಮುಖಂಡ ಪ್ರಾಣೇಶ ವಕೀಲ ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಈಗಾಗಲೇ ರಾಜ್ಯಕ್ಕೆ ಬೇಕಾದ ಅಗತ್ಯ ರಸಗೊಬ್ಬರ ಪೂರೈಕೆ ಮಾಡಿದೆ. ಆದರೆ ರಾಜ್ಯ ಸರ್ಕಾರ ಅದನ್ನು ಸಮರ್ಪಕವಾಗಿ ರೈತರಿಗೆ ವಿತರಿಸದೆ ಕಾಳಸಂತೆಯಲ್ಲಿ ಹೆಚ್ಚಿನ ಕಮಿಷನ್‌ಗಾಗಿ ಮಾರಾಟ ಮಾಡುತ್ತಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದ್ದು, ಸ್ವತಃ ಕಾಂಗ್ರೆಸ್ ಶಾಸಕರೇ ಅನುದಾನದ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಉಪಮುಖ್ಯಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಸಿಎಂ ಹುದ್ದೆ ಮೇಲೆ ಕಣ್ಣು ಇಟ್ಟಿದ್ದಾರೆ. ಇದೆಲ್ಲ ಬೆಳವಣಿಗೆ ಗಮನಿಸಿದರೆ ರಾಜ್ಯ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಗೋಚರಿಸುತ್ತದೆ ಎಂದರು.
ನಮ್ಮ ಸರ್ಕಾರದಲ್ಲಿ ನಾನೇನಾದರೂ ಹಗರಣಗಳನ್ನು ಮಾಡಿದ್ದರೆ, ಈಗ ಅವರದ್ದೇ ಸರ್ಕಾರ ಇದೆ ಬೇಕಾದರೆ ತನಿಖೆ ನಡೆಸಲಿ. ತಪ್ಪಿದ್ದಲ್ಲಿ ನಾನು ಶಿಕ್ಷೆ ಅನುಭವಿಸಲು ಸಿದ್ದನಿದ್ದೇನೆ ಎಂದು ಶ್ರೀರಾಮುಲು ಬಿ.ನಾಗೇಂದ್ರರ ಹೇಳಿಕೆಗೆ ತಿರುಗೇಟು ನೀಡಿದರು.
ರಾಜ್ಯ ಬಿಜೆಪಿಯಲ್ಲಿರುವ ಭಿನ್ನಮತವನ್ನು ಸರಿಪಡಿಸಲು ರಾಷ್ಟ್ರೀಯ ನಾಯಕರು ನನಗೆ ಜವಬ್ದಾರಿ ಕೊಟ್ಟರೆ ಎಲ್ಲರನ್ನೂ ಒಟ್ಟುಗೂಡಿಸುವ ಕೆಲಸ ಮಾಡುತ್ತೇನೆ. ಹರಪನಹಳ್ಳಿಯ ಬಿಜೆಪಿಯಲ್ಲಿನ ಆಂತರಿಕ ಬಿಕ್ಕಟ್ಟು ಶಮನಗೊಳಿಸಲು ಪ್ರಯತ್ನಿಸುವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಆರುಂಡಿ ನಾಗರಾಜ್, ಡಾ. ರಮೇಶ ಕುಮಾರ, ವಕೀಲ ಪ್ರಾಣೇಶ್, ಗಿರಜ್ಜಿ ನಾಗರಾಜ್, ಶ್ರೀನಿವಾಸ ನಾಯಕ, ಈಡಿಗರ ಅಂಜಿನಪ್ಪ, ಗಿರೀಶ್ ಸೇರಿದಂತೆ ಮತ್ತಿತರರು ಇದ್ದರು.