ವಿಜಯಸಾಕ್ಷಿ ಸುದ್ದಿ, ಗದಗ: ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ವಿದ್ಯಾರ್ಥಿಗಳು ಸಾಕಷ್ಟು ಪರಿಶ್ರಮಪಟ್ಟು ಅಭ್ಯಾಸ ಮಾಡಿದರೆ ಮಾತ್ರ ಉತ್ತಮ ಭವಿಷ್ಯ ಕಂಡುಕೊಳ್ಳಲು ಸಾಧ್ಯ ಎಂದು ಗದಗ ಜಿಮ್ಸ್ ಆಸ್ಪತ್ರೆಯ ಚಿಕ್ಕಮಕ್ಕಳ ತಜ್ಞ ಡಾ. ಈರಣ್ಣ ಹಳೇಮನಿ ಹೇಳಿದರು.
ಅವರು ಸೋಮವಾರ ಗದಗದ ಬಿ.ಜಿ. ಅಣ್ಣಿಗೇರಿ ಗುರುಗಳ ಆಶ್ರಮದಲ್ಲಿ ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನ ಏರ್ಪಡಿಸಿದ್ದ 76ನೇ ಆಧ್ಯಾತ್ಮಿಕ ಮತ್ತು ಶೈಕ್ಷಣಿಕ ಚಿಂತನ ಮಾಲಿಕೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಶಿಕ್ಷಣ ಕ್ಷೇತ್ರದಲ್ಲಿ ಇಂದು ಸ್ಪರ್ಧಾತ್ಮಕತೆ ಹೆಚ್ಚುತ್ತಿದೆ. ಈ ಸ್ಪರ್ಧಾತ್ಮಕತೆಯಲ್ಲಿ ಪ್ರತಿಭೆಯನ್ನು ಗುರುತಿಸಲು ಸಾಧ್ಯವಾಗುತ್ತದೆ. ಆದರೆ ಶಿಕ್ಷಣದಲ್ಲಿ ವ್ಯವಹಾರಿಕತೆ ಹೆಚ್ಚುತ್ತಿರುವುದು ವಿಷಾದದ ಸಂಗತಿ. ನಾವೆಲ್ಲ ಯುವಕರಾಗಿದ್ದಾಗ ಬಿ.ಜಿ. ಅಣ್ಣಿಗೇರಿ ಗುರುಗಳ ಈ ಆಶ್ರಮದಲ್ಲಿ ಉಚಿತ ಪಾಠ ಹೇಳಿಸಿಕೊಂಡು ಪರಿಶ್ರಮದಿಂದ ಅಭ್ಯಾಸ ಮಾಡಿದ್ದರ ಪರಿಣಾಮವಾಗಿ ಸಾವಿರಾರು ವಿದ್ಯಾರ್ಥಿಗಳು ಇಂದು ಉನ್ನತ ಸ್ಥಾನದಲ್ಲಿದ್ದಾರೆ ಎಂದರಲ್ಲದೆ, ಅಣ್ಣಿಗೇರಿ ಗುರುಗಳ ಪಾಠ ಬೋಧನೆಯ ವೈಖರಿಯನ್ನು ಬಣ್ಣಿಸಿ ಅಂತಹ ಗುರುಗಳು ನಮಗೆ ಲಭ್ಯವಾಗಿದ್ದು ನಮ್ಮೆಲ್ಲರ ಪುಣ್ಯ ಎಂದರು.
ಆಶ್ರಮವನ್ನು ಬಹಳಷ್ಟು ವ್ಯವಸ್ಥಿತವಾಗಿ ಮುನ್ನಡೆಸಿಕೊಂಡು ಬಂದಿರುವ ಸಮಿತಿಯವರ ಹಾಗೂ ಪ್ರತಿಭಾ ಪ್ರತಿಷ್ಠಾನದ ಪದಾಧಿಕಾರಿಗಳ ಕಾರ್ಯ ಅಭಿನಂದನೀಯ. ಇಲ್ಲಿ ಇಂದಿಗೂ ಉಚಿತ ಪಾಠಗಳನ್ನು ಅನುಭವಿ ಶಿಕ್ಷಕ-ಶಿಕ್ಷಕಿಯರು ಮುನ್ನಡೆಸಿಕೊಂಡು ಬಂದಿರುವುದು ಶ್ಲಾಘನೀಯ ಎಂದು ಬಣ್ಣಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರತಿಭಾ ಪ್ರತಿಷ್ಠಾನದ ಅಧ್ಯಕ್ಷ ಶಿವಕುಮಾರ ಪಾಟೀಲ, ಆಶ್ರಮ ಮತ್ತು ಪ್ರತಿಷ್ಠಾನದ ಕಾರ್ಯಚಟುವಟಿಕೆಗಳನ್ನು ವಿವರಿಸಿ ಸರ್ವರ ಸಹಕಾರದಿಂದ ಪ್ರಗತಿ ಸಾಧಿಸಲು ಸಾಧ್ಯವಾಗಿದೆ ಎಂದರು.
ಸುಭಾಷ್‌ಚಂದ್ರ ಬೆಟ್ಟದೂರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿ ದಂಡಿನ ಸಂದರ್ಭೋಚಿತವಾಗಿ ಮಾತನಾಡಿದರು. ಕೊನೆಗೆ ಮಂಜುಳಾ ತುಂಬುರಮಟ್ಟಿ ವಂದಿಸಿದರು. ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಉಪಾಧ್ಯಕ್ಷ ಡಾ.ಬಸಯ್ಯ ಬೆಳ್ಳೆರಿಮಠ, ಸಿದ್ದಣ್ಣ ಕವಲೂರ, ತೋಂಟೇಶ ವೀರಲಿಂಗಯ್ಯನಮಠ, ಬಸವರಾಜ ಬಿಂಗಿ, ರವಿ ದಂಡಿನ, ಶಿವಣ್ಣ ಕಟ್ಟಿ, ಗುರುರಾಜ ಅಣ್ಣಿಗೇರಿ, ಮಂಜುಳಾ ತುಂಬುರಮಟ್ಟಿ ಹಾಗೂ ಆಶ್ರಮದ ವಿದ್ಯಾರ್ಥಿಗಳು ಭಾಗವಹಿಸಿದ್ದರು.



