ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪಟ್ಟಣದ ಶ್ರೀ ಅನ್ನದಾನೇಶ್ವರ ಪದವಿ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಿಂದ ಸ್ಪರ್ಧಾತ್ಮಕ ಪರೀಕ್ಷಾ ಸಿದ್ಧತೆಯ ಒಂದು ದಿನದ ಕಾರ್ಯಾಗಾರ ನಡೆಯಿತು.
ಕಾರ್ಯಾಗಾರವನ್ನು ಧಾರವಾಡದ ಚಾಣಕ್ಯ ಕರಿಯರ್ ಅಕಾಡೆಮಿಯ ನಿರ್ದೇಶಕ ಪ್ರದೀಪ ಗಡ್ಡದ ಉದ್ಘಾಟಿಸಿ, ಪರೀಕ್ಷಾ ಸಿದ್ಧತೆ ಕುರಿತು ಮಾತನಾಡಿ, ಐಎಎಸ್, ಐಪಿಎಸ್, ಕೆಎಎಸ್, ಪಿಎಸ್‌ಐ, ಎಫ್‌ಡಿಎ ಪರೀಕ್ಷೆಗಳಿಗೆ ವಿದ್ಯಾರ್ಥಿಗಳ ಸಿದ್ಧತೆ ಹೇಗಿರಬೇಕು ಎಂಬುದನ್ನು ವಿವರವಾಗಿ ತಿಳಿಸಿದರು. ಕಷ್ಟ ಏನೇ ಬರಲಿ, ಫಲಿತಾಂಶ ಏನೇ ಆಗಲಿ ನಾನು ಈ ಪರೀಕ್ಷೆಯಲ್ಲಿ ಒಂದಲ್ಲೊಂದು ದಿನ ಗುರಿ ಮುಟ್ಟಿಯೇ ತೀರುತ್ತೇನೆ ಎನ್ನುವ ದೃಢ ನಿರ್ಧಾರ ನಿಮ್ಮದಾದರೆ ನಿಮ್ಮ ಕನಸು ನನಸಾಗುತ್ತದೆ ಎಂದು ತಿಳಿಸಿದರು.
ಯಾವ ಪುಸ್ತಕಗಳನ್ನು ಓದಬೇಕು, ಹೇಗೆ ಓದಬೇಕು, ಲೇಖಕರು ಯಾರು ಎಂಬುದನ್ನೆಲ್ಲ ಮೊದಲಿಗೆ ಸರಿಯಾಗಿ ತಿಳಿದುಕೊಳ್ಳಬೇಕು. ಇದನ್ನು ಸಾಧಿಸಬೇಕಾದರೆ ನಿಮ್ಮಲ್ಲಿ ಸಮಯಪ್ರಜ್ಞೆ, ತಾಳ್ಮೆ, ಸತತ ಅಧ್ಯಯನ, ಮಾರ್ಗದರ್ಶನ, ಸೂಕ್ತ ಕೋಚಿಂಗ್‌ನ್ನು ಪಡೆದುಕೊಳ್ಳಬೇಕೆಂದರು.
ಪವನ ಮಾಸರೆಡ್ಡಿ ಮಾತನಾಡಿ, ಡಿಜಿಟಲ್ ಗ್ರಂಥಾಲಯದ ಬಳಕೆ, ಸಮರ್ಪಕವಾದ ವಿಷಯ ಸಂಗ್ರಹಣೆ, ಬ್ಯಾಂಕ್ ಮತ್ತು ಆರ್‌ಆರ್‌ಬಿ ಪರೀಕ್ಷೆಗಳ ಸಿದ್ಧತೆಯನ್ನು ಹೇಗೆ ಮಾಡಬೇಕೆಂಬುದನ್ನು ಅನೇಕ ಪ್ರಾತ್ಯಕ್ಷಿಕೆಗಳ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.
ಪ್ರಾಚಾರ್ಯ ಎಸ್.ಜಿ. ಕೇಶಣ್ಣವರ ಮಾತನಾಡಿ, ಈ ಒಂದು ದಿನದ ಕಾರ್ಯಾಗಾರ ನಿಮ್ಮನ್ನು ಸ್ಪರ್ಧಾತ್ಮಕ ಪರೀಕ್ಷೆಗೆ ಸರಿಯಾಗಿ ತಯಾರು ಮಾಡಿದೆ ಎಂದುಕೊಳ್ಳುತ್ತೇವೆ. ನಿಮಗೆ ಇನ್ನೂ ಏನಾದರೂ ಸಂಶಯಗಳಿದ್ದರೆ ಪ್ರಾಧ್ಯಾಪಕರನ್ನು ಸಂಪರ್ಕಿಸಿ, ಅವರು ವಿಷಯ ಸಂಪನ್ಮೂಲ ವ್ಯಕ್ತಿಗಳನ್ನು ಸಂಪರ್ಕಿಸಿ ನಿಮ್ಮ ಸಂದೇಹಗಳಿಗೆ ಉತ್ತರ ನೀಡುತ್ತಾರೆ ಎಂದು ತಿಳಿಸಿದರು.
ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಡಾ. ಎಸ್.ಎ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ. ಸಿ.ಎಸ್. ರವಿ, ಡಾ. ರತ್ನಾ ಪಾಟೀಲ, ಡಾ. ಎಂ.ಆರ್. ಶಿವರಾಮ ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.



