ವಿಜಯಸಾಕ್ಷಿ ಸುದ್ದಿ, ಮುಂಡರಗಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ನೋಂದಾಯಿತವಾಗಿರುವ ತಾಲೂಕಿನ ಎಲ್ಲ ಗ್ರಾಮೀಣ ಕುಟುಂಬಗಳ ಉದ್ಯೋಗ ಚೀಟಿ ಇ-ಕೆವೈಸಿ ಪ್ರಕ್ರಿಯೆಯನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸಲು ತಾಲೂಕು ಪಂಚಾಯಿತಿ ನರೇಗಾ ಸಿಬ್ಬಂದಿಗಳಿಗೆ ತಾ.ಪಂ ಇಓ ವಿಶ್ವನಾಥ ಹೊಸಮನಿ ತಿಳಿಸಿದರು.
ತಮ್ಮ ಕಚೇರಿಯಲ್ಲಿ ನರೇಗಾ ಸಿಬ್ಬಂದಿಗಳ ಸಭೆ ನಡೆಸಿ ಮಾತನಾಡಿದ ಅವರು, ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದಿಂದ ಇ-ಕೆವೈಸಿ ಪ್ರಕ್ರಿಯೆ ಕಡ್ಡಾಯವಾಗಿ ಮಾಡಬೇಕಿರುವ ಕುರಿತು ಆದೇಶವಿರುವುದರಿಂದ ನರೇಗಾ ಕೂಲಿಕಾರರನ್ನು ಮನೆ ಮನೆಗೆ ಸಂಪರ್ಕಿಸಿ ಸಕ್ರಿಯವಾಗಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸೂಚಿಸಿದರು.
ತಾಲೂಕಿನ 19 ಗ್ರಾ.ಪಂಗಳು ಮಟ್ಟದಲ್ಲಿ ಮನರೇಗಾ ಸಿಬ್ಬಂದಿಗಳಾದ ಗ್ರಾಮ ಕಾಯಕ ಮಿತ್ರ, ಬಿಎಫ್‌ಟಿ, ತಾಂತ್ರಿಕ ಸಹಾಯಕರಿಗೆ ಇ-ಕೆವೈಸಿ ಕುರಿತು ತರಬೇತಿ ನೀಡಲಾಗಿದೆ. ಗ್ರಾ.ಪಂಗಳ ಇತರ ಸಿಬ್ಬಂದಿಗಳನ್ನು ಬಳಸಿಕೊಂಡು ಸಕ್ರಿಯ ಕೂಲಿಕಾರರ ಜಾಬ್ ಕಾರ್ಡ್‌ಗಳನ್ನು ಇ-ಕೆವೈಸಿ ಮೂಲಕ ಪರಿಶೀಲಿಸುವ ಕಾರ್ಯ ತುರ್ತಾಗಿ ನಡೆಯಲಿ ಎಂದರು.
ನರೇಗಾ ತಾಂತ್ರಿಕ ಸಹಾಯಕರು ಕೃಷಿ ಇಲಾಖೆ ಅಡಿಯ ಕೃಷಿ ಹೊಂಡ ಕಾಮಗಾರಿಗಳನ್ನು ಶೀಘ್ರವೇ ಆರಂಭಿಸಿ, ಕೂಲಿಕಾರರಿಗೆ ಉದ್ಯೋಗ ನೀಡಲು ಸೂಚಿಸಿ. ಇದರಿಂದ ಮಾನವ ದಿನಗಳ ಸೃಜನೆಯು ಸಾಧ್ಯವಾಗಲಿದೆ. ಈ ಬಗ್ಗೆ ಗಮನಹರಿಸಿ ಎಂದು ತಿಳಿಸಿದರು.
ಚಾಲ್ತಿ ಕಾಮಗಾರಿಗಳನ್ನು ಮುಕ್ತಾಯಗೊಳಿಸಿ ಹೊಸ ಕಾಮಗಾರಿಗಳ ಮೂಲಕ ಗ್ರಾಮೀಣ ಭಾಗದಲ್ಲಿ ಕೂಲಿಕಾರರಿಗೆ ಉದ್ಯೋಗ ನೀಡಿ. 2026-27ನೇ ನರೇಗಾ ಕ್ರಿಯಾಯೋಜನೆಗೆ ಈಗಾಗಲೇ ಸುತ್ತೋಲೆ ಬಂದಿದ್ದು, ಕ್ರಿಯಾಯೋಜನೆ ಸಿದ್ಧಪಡಿಸುವ ಕಾರ್ಯ ನಡೆಯಲಿ ಎಂದರು.
ಈ ವೇಳೆ ಟಿಸಿ ಪ್ರವೀಣ ಸೂಡಿ, ಟಿಎಂಐಎಸ್ ಬಸವರಾಜ ಮಣ್ಣಮ್ಮನವರ, ತಾಂತ್ರಿಕ ಸಹಾಯಕರು, ಬಿಎಫ್‌ಟಿಗಳು ಇದ್ದರು.



