ಆರೋಗ್ಯ ನಿಯಮಗಳ ಪಾಲನೆ ಅತ್ಯಗತ್ಯ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಆರೋಗ್ಯವೇ ಜೀವನ, ಅನಾರೋಗ್ಯವೇ ಮರಣ. ಆರೋಗ್ಯವಿಲ್ಲದ ಜೀವನ ಬರೀ ಗೋಳು, ಆರೋಗ್ಯವೇ ಸ್ವರ್ವಸ್ವ ಮುಂತಾಗಿ ಆರೋಗ್ಯದ ಮಹಿಮೆ ಬಗ್ಗೆ ಮಾತಾಡುತ್ತೇವೆ. ಆರೋಗ್ಯ ಮಾತಿನಿಂದ ದೊರೆಯುವದಿಲ್ಲ. ಶ್ರಮವಹಿಸಿ ಸಾಧನೆ ಮಾಡಿ ಪಡೆಯಬೇಕು. ಉತ್ತಮ ದಿನಚರಿ, ನಿತ್ಯ ಯೋಗಾಭ್ಯಾಸ, ವ್ಯಾಯಾಮ ಸಾಧನೆ, ಸಾತ್ವಿಕ ಆಹಾರ ಸೇವನೆ, ಸತ್ಸಂಗ, ಮಂತ್ರ /ವಚನ ಪಠಣ, ದುರಾಭ್ಯಾಸಗಳಿಂದ ದೂರ, ದೈಹಿಕ ಶ್ರಮ, ಸೇವಾಕಾರ್ಯಗಳನ್ನು ಪಾಲಿಸಿದರೆ ಖಂಡಿತ ಆರೋಗ್ಯವಂತರಾಗಿರುವೆವು. ಆಗ ಆನಂದಮಯ ಜೀವನ ನಮ್ಮದಾಗುವುದು. ಹೀಗಾಗಿ ಆರೋಗ್ಯ ನಿಯಮಗಳ ಪಾಲನೆ-ಆನಂದ ಜೀವನದ ಜೀವಾಳವಾಗಿದೆ ಎಂದು ಶೇಗುಣಸಿ ವಿರಕ್ತಮಠದ ಡಾ. ಮಹಾಂತಪ್ರಭುಸ್ವಾಮಿಗಳು ಅಭಿಪ್ರಾಯಪಟ್ಟರು.

Advertisement

ಶ್ರೀ ಜಗದ್ಗುರು ತೋಂಟದಾರ್ಯ ಜಾತ್ರಾಮಹೋತ್ಸವ-2025 ಮತ್ತು ಎಸ್.ವಾಯ್.ಬಿ.ಎಂ.ಎಸ್. ಯೋಗಪಾಠಶಾಲೆ ಗದಗ ಇವರುಗಳ ಸಹಯೋಗದಲ್ಲಿ ತೋಂಟದಾರ್ಯ ಜಾತ್ರೆಯ ನಿಮಿತ್ತ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರ ಅನುಭವ ಮಂಟಪದಲ್ಲಿ ನಡೆದಿರುವ ಉಚಿತ ಯೋಗ ತರಬೇತಿ ಶೀಬಿರದಲ್ಲಿ ಜರುಗಿದ ವಿಶ್ವ ಆರೋಗ್ಯ ದಿನಾಚರಣೆ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡುತ್ತಿದ್ದರು.

ಪ್ರಸ್ತುತ ದಿನಮಾನದಲ್ಲಿ ಎಲ್ಲರಿಗೂ ಆರೋಗ್ಯದ ಅಗತ್ಯವಿದೆ. ಯೋಗ ಜನಾಂಗಕ್ಕಿಂತಲೂ ಅತ್ಯವಶ್ಯಕವಾಗಿದೆ. ಅಂತೆಯೇ ಈ ವರ್ಷದ ವಿಶ್ವ ಆರೋಗ್ಯ ದಿನದ ಧ್ಯೇಯ ವಾಕ್ಯ `ಆರೋಗ್ಯದ ಆರಂಭ, ಭರವಸೆಯ ಭವಿಷ್ಯ’ ಎಂಬುದಾಗಿದೆ. ಆದ್ದರಿಂದ ನಾವೆಲ್ಲರೂ ಆರೋಗ್ಯ ಅರಿತು ಆಚರಿಸಿದರೆ ಈ ನಾಡು ಸುಂದರವಾಗುವುದೆಂದು ಹೇಳಿದರು.

ಈ ಸಂದರ್ಭದಲ್ಲಿ ಬಸವ ಯೋಗಾಶ್ರಮ ಕಡಕೋಳ ಇವರು ಆಯೋಜಿಸಿರುವ ಬಸವ ಆರೋಗ್ಯ ಜಾತ್ರೆ ಅಂಗವಾಗಿ ಜರಗುವ ಕಾರ್ಯಕ್ರಮಗಳ ಮಾಹಿತಿಯನ್ನು ಕಾರ್ಯಕರ್ತರಾದ ಸಂಗಪ್ಪಶೆಟ್ಟರ ಸಭೆಗೆ ತಿಳಿಸಿ ಆಮಂತ್ರಣ ನೀಡಿದರು.

ಶ್ರೀಮಠದ ಮೀಸಲು ಭಕ್ತರಾದ ವೀರಣ್ಣ ಗೋಟಡಕಿ ಮತ್ತು ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ಎಂ.ವಿ. ಐಹೊಳ್ಳಿ ಶಿಬಿರದ ಪರವಾಗಿ ಡಾ. ಮಹಾಂತಪ್ರಭುಸ್ವಾಮಿಗಳಿಗೆ ಭಕ್ತಿ ಕಾಣಿಕೆ ಸಮರ್ಪಿಸಿದರು.

ಪ್ರಾರಂಭದಲ್ಲಿ ಶಿಬಿರಾರ್ಥಿಗಳೆಲ್ಲರೂ ಸಾಮೂಹಿಕವಾಗಿ ಆರೋಗ್ಯ ಪ್ರಾರ್ಥನೆ ಹೇಳಿದರು. ಪ್ರೊ. ಡಿ.ಆರ್. ಮಮದಾಪೂರ ಸರ್ವರಿಗೂ ಸ್ವಾಗತ ಕೋರಿದರು. ಶಿಬಿರದ ಮಾರ್ಗದರ್ಶಕ ಕೆ. ಎಸ್. ಪಲ್ಲದ ಕಾರ್ಯಕ್ರಮ ನಿರೂಪಿಸಿದರು. ಬಸವರಾಜ ಕರಿಬಿಷ್ಠಿ ವಂದಿಸಿದರು.

ವೇದಿಕೆಯಲ್ಲಿ ಹಿರಿಯ ಯೋಗ ಸಾಧಕರಾದ ಎಸ್.ಕೆ. ಮೇಲ್ಮುರಿ, ಸದಾನಂದ ಕಾಮತ, ಯೋಗ ಅಭಿಮಾನಿಗಳಾದ ನಾರಾಯಣಸ್ವಾಮಿ, ತೋಂಟದಾರ್ಯ ಜಾತ್ರಾಮಹೋತ್ಸವ ಸಮಿತಿ ಉಪಾಧ್ಯಕ್ಷೆ ಶೈಲಾ ಕೊಡೆಕಲ್ಲ, ಗದಗ ಜಿಲ್ಲಾ ಪತಂಜಲಿ ಯೋಗ ಸಮಿತಿ ಪ್ರಭಾರಿ ಗಿರಿಯಪ್ಪ ಮಡಿವಾಳರ, ಯೋಗ ಶಿಕ್ಷಕಿ ಶೋಭಾ ಗುಗ್ಗರಿ ಉಪಸ್ಥಿತರಿದ್ದು ಪ್ರಾಸ್ತಾವಿಕವಾಗಿ ಮಾತನಾಡಿದರು.


Spread the love

LEAVE A REPLY

Please enter your comment!
Please enter your name here