ಹಾಸನದಲ್ಲಿ ಯಶ್ ತಾಯಿ ಪುಷ್ಪಾ ಅರುಣ್ ವಿರುದ್ಧ ಕೇಳಿಬಂದ ಭೂಮಿ ಅಕ್ರಮ ಒತ್ತುವರಿ ಆರೋಪ ಇದೀಗ ತೀವ್ರ ತಿರುವು ಪಡೆದುಕೊಂಡಿದೆ. ಸೈಟ್‌ನಲ್ಲಿದ್ದ ಶೆಡ್ ಹಾಗೂ ಕಾಂಪೌಂಡ್ ಅನ್ನು ಜೆಸಿಬಿ ಮೂಲಕ ಧ್ವಂಸಗೊಳಿಸಿರುವುದನ್ನು ಪುಷ್ಪಾ ಅರುಣ್ ಹಾಗೂ ಅವರ ವಕೀಲರು ತೀವ್ರವಾಗಿ ಖಂಡಿಸಿದ್ದಾರೆ.
ಪುಷ್ಪಾ ಪರ ವಕೀಲ ಸಂಜಯ್ ಮಾತನಾಡಿ, “ಇವರು ಕಾನೂನುಬಾಹಿರವಾಗಿ ಬಂದು ಕಾಂಪೌಂಡ್ ಒಡೆದಿದ್ದಾರೆ. ಕೋರ್ಟ್‌ನಲ್ಲಿ ಇಂತಹ ಯಾವುದೇ ತೆರವು ಆದೇಶವೇ ಇಲ್ಲ. ನ್ಯಾಯಾಲಯಕ್ಕೆ ದಿಕ್ಕು ತಪ್ಪಿಸಿ ಆದೇಶ ಮಾಡಿಸಿಕೊಂಡಿದ್ದಾರೆ” ಎಂದು ಗಂಭೀರ ಆರೋಪ ಮಾಡಿದ್ದಾರೆ.
ನಮ್ಮ ಕಕ್ಷಿದಾರರು ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ಸೈಟ್ ಖರೀದಿಸಿದ್ದಾರೆ. ಆದರೆ ಸುಮ್ಮನೇ ಪುಷ್ಪಾ ಅರುಣ್ ಅವರನ್ನು ಪಾರ್ಟಿ ಮಾಡಿ ಕೇಸ್ ಹಾಕಲಾಗಿದೆ. ಈಗ ಶೆಡ್ ಹಾಗೂ ಕಾಂಪೌಂಡ್ ಒಡೆದಿರುವ ವಿಚಾರದಲ್ಲೂ ನಾವು ಪ್ರತ್ಯೇಕವಾಗಿ ಕಾನೂನು ಹೋರಾಟ ನಡೆಸುತ್ತೇವೆ ಎಂದು ಹೇಳಿದ್ದಾರೆ.
ಈ ನಡುವೆ ಸ್ವತಃ ಪುಷ್ಪಾ ಅರುಣ್ ಕೂಡ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. “ನನ್ನ ವಿರುದ್ಧ ಮಾನಹಾನಿ ಮೊಕದ್ದಮೆ ಹೂಡುತ್ತೇನೆ. ಲಾಯರ್ ಆಫೀಸ್‌ನಲ್ಲೇ ನಮ್ಮ ಬಳಿ ಹಣ ಕೇಳಿದ್ದಾರೆ. ದೊಡ್ಡ ದೊಡ್ಡ ವ್ಯಕ್ತಿಗಳನ್ನು ಹೆದರಿಸಿ ದುಡ್ಡು ಕೀಳೋದೇ ಇವನ ದಂಧೆ” ಎಂದು ಆರೋಪಿಸಿದ್ದಾರೆ.
“ಕಾಂಪೌಂಡ್ ಒಡೆದಿರುವ ಜಾಗಕ್ಕೆ ದಾಖಲೆಗಳೇ ಇಲ್ಲ. ರೌಡಿಸಂ ಮಾಡ್ತಾ ಇದ್ದಾರೆ. ನಾವು ಸೆಲೆಬ್ರಿಟಿಗಳು, ಯಶ್ ನಟ ಅನ್ನೋ ಕಾರಣಕ್ಕೆ ನಮ್ಮನ್ನೇ ಟಾರ್ಗೆಟ್ ಮಾಡಿ ಹೆದರಿಸ್ತಿದ್ದಾರೆ” ಎಂದು ಪುಷ್ಪಾ ಅರುಣ್ ಕಿಡಿಕಾರಿದ್ದಾರೆ.
ಈ ಪ್ರಕರಣ ಇದೀಗ ಕಾನೂನು ಹೋರಾಟ, ಸೆಲೆಬ್ರಿಟಿ ಟಾರ್ಗೆಟಿಂಗ್ ಮತ್ತು ಭೂ ವಿವಾದದ ಭಾರೀ ರಾಜಕೀಯ–ಸಾಮಾಜಿಕ ಚರ್ಚೆಗೆ ಕಾರಣವಾಗಿದೆ.



