ವಿಜಯಸಾಕ್ಷಿ ಸುದ್ದಿ, ಧಾರವಾಡ: 3ನ್ಯಾಯಮೂರ್ತಿ ಡಾ. ಎಚ್.ಎನ್. ನಾಗಮೋಹನ್‌ದಾಸ್ ಏಕ ಸದಸ್ಯ ವಿಚಾರಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಯ ಪಟ್ಟಿಗೆ ಸೇರಿರುವ ಜನರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ, ಔದ್ಯೋಗಿಕ ಪ್ರಾತಿನಿಧ್ಯದ ಸ್ಥಿತಿಗತಿಗಳ ಬಗ್ಗೆ ಸಮೀಕ್ಷೆ ಮಾಡುವ ಉದ್ದೇಶದಿಂದ ಹಮ್ಮಿಕೊಂಡಿದ್ದು, ಸಮೀಕ್ಷೆದಾರರು ಜಿಲ್ಲೆಯ ಯಾವ ಪರಿಶಿಷ್ಟ ಜಾತಿಯ ಕುಟುಂಬಗಳೂ ಈ ಸಮೀಕ್ಷೆಯಿಂದ ಹೊರಗುಹಿಯದಂತೆ ಮುಂಜಾಗ್ರತೆ ವಹಿಸಿ, ನಿಯಮಾನುಸಾರ ಸಮೀಕ್ಷೆ ಮಾಡಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
ಅವರು ಗುರುವಾರ ಮಧ್ಯಾಹ್ನ ಧಾರವಾಡ ನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ, ಪರಿಶಿಷ್ಟ ಜಾತಿ ಕುಟುಂಬಗಳ ಸಮೀಕ್ಷಾ ಕಾರ್ಯದ ಪ್ರಗತಿ ಪರಿಶೀಲನೆ ಮಾಡಿದರು.
ವಿಭಿನ್ನ ಸ್ಥಳಗಳಲ್ಲಿ ವಾಸವಾಗಿರುವ ಅಥವಾ ವಿಭಿನ್ನ ವೃತ್ತಿಗಳನ್ನು ತೊಡಗಿರುವ ವ್ಯಕ್ತಿಗಳು ಹಾಗೂ ಜನ ಸಮೂಹಗಳಿಗೆ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಯನ್ನು ಕಡಿಮೆ ಮಾಡಲು ಮತ್ತು ಸ್ಥಾನಮಾನ ಸೌಲಭ್ಯ ಹಾಗೂ ಅವಕಾಶಗಳಲ್ಲಿ ತಾರತಮ್ಯವನ್ನು ತೊಡೆದು ಹಾಕಲು ಕಾರ್ಯಕ್ರಮ ರೂಪಿಸುವುದಕ್ಕಾಗಿ ಸಾಮಾಜಿಕ ಸ್ಥಿತಿಗತಿಗಳ ಅಧ್ಯಯನ ಮಾಡಬೇಕಾಗಿರುವುದರಿಂದ ಈ ಸಮೀಕ್ಷೆಯನ್ನು ಕೈಗೊಳ್ಳಲಾಗಿದೆ. ಸಮೀಕ್ಷೆದಾರರು ಉದ್ದೇಶ ಅರಿತು ಸರಿಯಾಗಿ ಕುಟುಂಬಗಳ ಆರ್ಥಿಕ, ಶೈಕ್ಷಣಿಕ, ಜೌದ್ಯೋಗಿಕ ಅಂಶಗಳನ್ನು ಸಮೀಕ್ಷೆಯಲ್ಲಿ ದಾಖಲಿಸಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.