ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಸರ್ಕಾರದ ಎಲ್ಲ ಇಲಾಖೆಯ ಅಧಿಕಾರಿಗಳು ಕಚೇರಿ ಅವಧಿಯಲ್ಲಿ ಸರಿಯಾಗಿ ಕಾರ್ಯನಿರ್ವಹಿಸಬೇಕು. ಕಚೇರಿಗಳಲ್ಲಿ ಸಿಸಿ ಕ್ಯಾಮರಾ, ಬಯೋಮೆಟ್ರಿಕ್ ಅಳವಡಿಸಿಕೊಳ್ಳಬೇಕು ಮತ್ತು ಮಧ್ಯವರ್ತಿಗಳಿಗೆ ಅವಕಾಶ ಕಲ್ಪಿಸಬೇಡಿ. ದೂರು ಬಂದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಲೋಕಾಯುಕ್ತ ಡಿವೈಎಸ್ಪಿ ವಿಜಯ ಬಿರಾದಾರ ಹೇಳಿದರು.
ಅವರು ಬುಧವಾರ ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಸಾರ್ವಜನಿಕರ ಕುಂದು-ಕೊರತೆ, ಅಹವಾಲು ಸ್ವೀಕಾರ ಸಭೆಯಲ್ಲಿ ಮಾತನಾಡಿ, ಯಾವುದೇ ಸರ್ಕಾರಿ ಅಧಿಕಾರಿಗಳು ತಮ್ಮ ವ್ಯಾಪ್ತಿ ಹೊರತುಪಡಿಸಿ ಸರ್ಕಾರಿ ವಾಹನ ಬಳಸುವಂತಿಲ್ಲದಿದ್ದರೂ ಕೆಲ ಅಧಿಕಾರಿಗಳು ವಾಹನ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ವಸತಿ ಶಾಲೆಗಳಲ್ಲಿ ವಾರ್ಡನ್, ಗ್ರಾ.ಪಂ ಕಚೇರಿಗಳಲ್ಲಿ ಪಿಡಿಓಗಳು ಬಹುತೇಕ ಹೊರಗಡೆಯೇ ಇರುತ್ತಾರೆ. ಕಚೇರಿಯಲ್ಲಿ ಚಲನವಲನ ರಜಿಸ್ಟರ್ ಕಡ್ಡಾಯವಾಗಿ ಬಳಸಬೇಕು ಎಂದರು.
ಸಭೆಯಲ್ಲಿ ಪಟ್ಟಣದ ಮಂಜುನಾಥ ಹೊಗೆಸೊಪ್ಪಿನ, ಕಳೆದ ಹತ್ತಾರು ವರ್ಷಗಳ ಹಿಂದೆಯೇ 40 ಕೋಟಿ ರೂ ವೆಚ್ಚದಲ್ಲಿ ಪ್ರಾರಂಭಗೊಂಡ ಒಳಚರಂಡಿ ಯೋಜನೆ ಕಾಮಗಾರಿ ಸಂಪೂರ್ಣ ವಿಫಲವಾಗಿದೆ. ಈ ಬಗ್ಗೆ ತನಿಖೆಯಾಗಬೇಕು ಎಂದು ದೂರು ಸಲ್ಲಿಸಿದರು.
ಸದಾನಂದ ನಂದೆಣ್ಣವರ, ಕೋಟ್ಯಾಂತರ ರೂ ವೆಚ್ಚದಲ್ಲಿ ಪಟ್ಟಣದಲ್ಲಿ ಕೊಳಚೆ ನಿಮೂರ್ಲನ ಮಂಡಳಿಯಿಂದ ನಡೆಯುತ್ತಿರುವ ಆಶ್ರಯ ಮನೆಗಳು ಸಂಪೂರ್ಣ ಕಳಪೆಯಾಗಿವೆ ಮತ್ತು ಅಪೂರ್ಣಗೊಂಡಿದ್ದು, ಗುತ್ತಿಗೆದಾರರು ಆಡಿದ್ದೇ ಆಟವಾಗಿದೆ. ಈ ಬಗ್ಗೆ ತನಿಖೆಯಾಗಬೇಕು ಎಂದು ದೂರು ಸಲ್ಲಿಸಿದರು.
ಶಿಗ್ಲಿ ಗ್ರಾ.ಪಂ ಸದಸ್ಯ ಸುರೇಶ ಸ್ವಾದಿ, ಶಿಗ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಗ್ರಾ.ಪಂ ಒಡೆತನದ ಆಸ್ತಿಯನ್ನು ಒತ್ತುವರಿ ಮತ್ತು ಪರಭಾರೆ ಮಾಡಿದ್ದಾರೆ. ಕಡು ಬಡವರಿಗೆ ಮೀಸಲಿಟ್ಟ ನಿವೇಶನಗಳನ್ನು ಉಳ್ಳವರಿಗೆ ಪರಭಾರೆ ಮಾಡಿದ್ದಾರೆ. ಒಟ್ಟಿನಲ್ಲಿ ಆಗಿರುವ ಅಕ್ರಮ ತನಿಖೆಗೊಳಪಟ್ಟು ಸಾರ್ವಜನಿಕರಿಗೆ ನ್ಯಾಯ ಸಿಗಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಇಲಾಖೆಯ ಅಧಿಕಾರಿಗಳಿಗೆ ತಮ್ಮ ಇಲಾಖೆಯ ಬಗ್ಗೆ ಸಾರ್ವಜನಿಕರು ಕೊಡುವ ದೂರುಗಳ ಬಗ್ಗೆ ತಿಳಿಸಿ ಎಚ್ಚತ್ತುಕೊಳ್ಳುವಂತೆ ವಿಜಯ ಬಿರಾದಾರ ಸೂಚಿಸಿದರು. ಸಭೆಯಲ್ಲಿ ಸಾರ್ವಜನಿಕರಿಂದ ಆರೋಗ್ಯ, ಪೊಲೀಸ್, ಪಿಡಬ್ಲೂಡಿ, ಕಂದಾಯ ಇಲಾಖೆಯ ಬಗ್ಗೆ ಕೆಲವು ಲಿಖಿತ ಮತ್ತು ಹಲವು ಮೌಖಿಕ ದೂರುಗಳು ಸಲ್ಲಿಕೆಯಾದವು.
ಈ ಸಂದರ್ಭದಲ್ಲಿ ತಹಸೀಲ್ದಾರ ವಾಸುದೇವ ಸ್ವಾಮಿ, ಲೋಕಾಯುಕ್ತ ಆರಕ್ಷಕ ನಿರೀಕ್ಷಕ ರವಿ ಪುರುಷೋತ್ತಮ, ಎಸ್.ಎಸ್. ತೇಲಿ, ಮುಖ್ಯಾಧಿಕಾರಿ ಮಹೇಶ ಹೆಚ್ ಮತ್ತು ವಿವಿಧ ಇಲಾಖೆಯ ಅಧಿಕಾರಿ-ಸಿಬ್ಬಂದಿಗಳಿದ್ದರು.
ಗ್ರಾ.ಪಂ ಮತ್ತು ಪುರಸಭೆ ವ್ಯಾಪ್ತಿಯಲ್ಲಿ ಅದರಲ್ಲೂ ಅಂಗನವಾಡಿ, ಶಾಲಾ-ಕಾಲೇಜು ಸುತ್ತಮುತ್ತ ಸ್ವಚ್ಛತೆ ಕಾಪಾಡುತ್ತಿಲ್ಲ. ಶುದ್ಧ ಆಹಾರ ಪದಾರ್ಥ ಮತ್ತು ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ದೂರುಗಳು ಹೆಚ್ಚುತ್ತಿವೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ನಿಗಾ ವಹಿಸಬೇಕು. ಸಬ್ ರಜಿಸ್ಟಾçರ್ ಕಚೇರಿಯಲ್ಲಿ ಬಾಂಡ್ ರೈಟರ್‌ಗಳಿಗೆ, ಮಧ್ಯವರ್ತಿಗಳಿಗೆ ಮುಕ್ತ ಅವಕಾಶ ಕಲ್ಪಿಸಬೇಡಿ. ದರಪಟ್ಟಿ ಕಡ್ಡಾಯವಾಗಿ ಸಾರ್ವಜನಿಕರಿಗೆ ಕಾಣುವಂತೆ ಅಳವಡಿಸಿ ಎಂದು ವಿಜಯ ಬಿರಾದಾರ ಹೇಳಿದರು.