ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ರಸ್ತೆ ಅಪಘಾತ ಮತ್ತು ಜೀವ ರಕ್ಷಣೆಗೆ ವಾಹನ ಚಾಲಕರು ಕಡ್ಡಾಯವಾಗಿ ರಸ್ತೆ ನಿಯಮ ಪಾಲಿಸಬೇಕು ಎಂದು ಲಕ್ಮೇಶ್ವರ ಠಾಣೆಯ ಅಪರಾಧ ವಿಭಾಗದ ಪಿಎಸ್‌ಐ ಟಿ.ಕೆ. ರಾಠೋಡ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆ ವ್ಯಾಪ್ತಿಯ ಬಸ್ ನಿಲ್ದಾಣ, ಪ್ರಮುಖ ರಸ್ತೆ ಸಂಪರ್ಕ ಸ್ಥಳದಲ್ಲಿ ವಾಹನ ಸವಾರರು ಹಾಗೂ ವಿದ್ಯಾರ್ಥಿಗಳಲ್ಲಿ ರಸ್ತೆ ಸುರಕ್ಷತಾ ಅರಿವು ಅಭಿಯಾನ ಹಾಗೂ ಅಪರಾಧ ತಡೆ ಮಾಸಾಚರಣೆ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಪರಾಧ ತಡೆಯಲು ಸಾರ್ವಜನಿಕರು ಪೊಲೀಸರ ಜತೆ ಸಹಕರಿಸಬೇಕು. ಪ್ರತಿಯೊಬ್ಬರೂ ಕಡ್ಡಾಯವಾಗಿ ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸಿ ವಾಹನ ಚಲಾವಣೆ ಮಾಡಬೇಕು. ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ ಆಗದಂತೆ ವಾಹನ ನಿಲುಗಡೆ ಮಾಡಬೇಕು. ಕಾನೂನಿನ ಅರಿವು ಪ್ರತಿಯೊಬ್ಬರಿಗೂ ಇದ್ದಾಗ ಅಪರಾಧಗಳನ್ನು ತಡೆಗಟ್ಟಲು ಸಾಧ್ಯ. ಶಾಲಾ ವಾಹನಗಳಿಗೂ ಸುರಕ್ಷತೆ ಇರಲಿ. ಯುವಕರು ಹೆಚ್ಚಿನ ವೇಗ ಮತ್ತು ನಿರ್ಲಕ್ಷ್ಯತನದಿಂದ ವಾಹನ ಚಲಾಯಿಸುವುದು ಅಪಾಯಕಾರಿ ಎಂದು ಹೇಳಿದರು.
ಬಸ್ ನಿಲ್ದಾಣದಲ್ಲಿ ಸಾರಿಗೆ ಸಿಬ್ಬಂದಿಗಳಿಗೆ, ಕಾಲೇಜು ವಿದ್ಯಾರ್ಥಿಗಳಿಗೆ, ರಿಕ್ಷಾ ಸ್ಟ್ಯಾಂಡ್, ಕಾರ್ ಸ್ಟ್ಯಾಂಡ್ ಗಳಲ್ಲಿ ಜಾಗೃತಿ ಮೂಡಿಸಲಾಯಿತು. ಈ ವೇಳೆ ಪೊಲೀಸ್ ಸಿಬ್ಬಂದಿ ಎಚ್.ಐ. ಕಲ್ಲಣ್ಣವರ, ಸಾರಿಗೆ ಸಿಬ್ಬಂದಿಗಳು, ಅಟೋ-ಕಾರ್ ಚಾಲಕರು, ಅಗಡಿ ಪಿಯು ಕಾಲೇಜಿನ ವಿದ್ಯಾರ್ಥಿಗಳು ಇದ್ದರು.