ವಿಜಯಸಾಕ್ಷಿ ಸುದ್ದಿ, ಡಂಬಳ : ಮತದಾನ ಸಂವಿಧಾನ ನಮಗೆ ನೀಡಿದ ವರದಾನ. ಅಂತಹ ಅತ್ಯಮೂಲ್ಯ ಹಕ್ಕನ್ನು ತಪ್ಪದೇ ಚಲಾಯಿಸುವುದು ಎಲ್ಲರ ಜವಾಬ್ದಾರಿ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ವಿಶ್ವನಾಥ ಹೊಸಮನಿ ಹೇಳಿದರು.
ಡಂಬಳ ಗ್ರಾಮದ ಹೊರವಲಯದಲ್ಲಿನ ನರೇಗಾ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ಕಾಮಗಾರಿ ಪರಿಶೀಲಿಸಿದ ನಂತರ ಮತದಾನ ಜಾಗೃತಿ ಮೂಡಿಸಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವ ಗಟ್ಟಿಗೊಳ್ಳಬೇಕಾದರೆ ಎಲ್ಲರೂ ತಪ್ಪದೇ ಮತ ಚಲಾಯಿಸಬೇಕು. ಸ್ವಯಂ ಪ್ರೇರಣೆಯಿಂದ ಎಲ್ಲರೂ ನಿಮ್ಮ ನಿಮ್ಮ ನೆರೆಹೊರೆಯವರಲ್ಲೂ ತಪ್ಪದೇ ಮತದಾನ ಮಾಡುವಂತೆ ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.
ನರೇಗಾ ಕೂಲಿ ಮೊತ್ತ ಈಗ 349 ರೂ.ಗೆ ಹೆಚ್ಚಳವಾಗಿದೆ. ಅಳತೆಗೆ ತಕ್ಕಂತೆ ಕಾಮಗಾರಿಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಎಲ್ಲರೂ ಶ್ರಮಿಸಬೇಕು. ಸಾಮೂಹಿಕ ಬದು ನಿರ್ಮಾಣ ಕಾಮಗಾರಿಯಿಂದ ಮಣ್ಣಿನ ಫಲವತ್ತತೆ ಹೆಚ್ಚಳವಾಗಿ, ಮಣ್ಣಿನ ಸವಕಳಿ ತಡೆಗಟ್ಟಲು ನೆರವಾಗುತ್ತದೆ.
ಇದರಿಂದ ರೈತರಿಗೆ ಅನುಕೂಲ ಎಂದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಮೋದ ತುಂಬಳ, ಪಿಡಿಓ ಶಶಿಧರ ಹೊಂಬಳ, ಟಿಸಿ ಹರೀಶ ಸೊಬರದ ಹಾಗೂ ಗ್ರಾ.ಪಂ ಸಿಬ್ಬಂದಿಗಳು ಹಾಜರಿದ್ದರು.