ವಿಜಯಸಾಕ್ಷಿ ಸುದ್ದಿ, ನರಗುಂದ : ಮೇ 7ರ ಮತದಾನದ ದಿನದಂದು ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕೆಂದು ನರಗುಂದ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಹಾಗೂ ನರಗುಂದ ತಹಸೀಲ್ದಾರ ಶ್ರೀಶೈಲ್ ತಳವಾರ ಹೇಳಿದರು.
ನರಗುಂದ ನಗರದಲ್ಲಿ ಗದಗ ಜಿಲ್ಲಾ ಮತ್ತು ನರಗುಂದ ತಾಲೂಕು ಚುನಾವಣೆ ಸ್ವೀಪ್ ಸಮಿತಿ, ವಿವಿಧೋದ್ದೇಶ ಪುನರ್ ವಸತಿ (MRW) ಮತ್ತು ಗ್ರಾಮೀಣ ಪುನರ್ ವಸತಿ (VRW) ಹಾಗೂ ತಾಲೂಕು ಪಂಚಾಯತ ನರಗುಂದ ವತಿಯಿಂದ ಹಮ್ಮಿಕೊಂಡಿದ್ದ `ಸಾರ್ವಜನಿಕರಿಗೆ ಮತದಾನ ಜಾಗೃತಿ ಜಾಥಾ’ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಲೋಕಸಭೆ ಚುನಾವಣೆಯಲ್ಲಿ ಎಲ್ಲ ಮತದಾರರು ಕಡ್ಡಾಯವಾಗಿ ಮತದಾನ ಮಾಡಬೇಕು. ಮತದಾನ ನಮ್ಮ ಹಕ್ಕು, ನಮ್ಮ ಇಷ್ಟದ ಅಭ್ಯರ್ಥಿಗೆ ಮತ ಚಲಾಯಿಸುವ ಕೆಲಸ ನಮ್ಮದಾಗಬೇಕು. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಶೇ.100ರಷ್ಟು ಮತದಾನ ಮಾಡಿದರೆ ಮಾತ್ರ ಪ್ರಜಾಪ್ರಭುತ್ವದ ಪ್ರಾಮುಖ್ಯತೆಗೆ ಅರ್ಥ ಬರುತ್ತದೆ. ಹೆದರಿಕೆ-ಬೆದರಿಕೆಗೆ ಅಂಜದೇ ಧೈರ್ಯವಾಗಿ ಮತವನ್ನು ಚಲಾಯಿಸಿ, ಸಂವಿಧಾನ ನೀಡಿರುವ ಹಕ್ಕನ್ನು ಚಲಾಯಿಸಿ ಎಂದರು.
ಜಾಗೃತಿ ಜಾಥಾದಲ್ಲಿ ಭಾಗವಹಿಸಿದ ಆಶಾ ಕಾರ್ಯಕರ್ತೆಯರು, ಅಧಿಕಾರಿ-ಸಿಬ್ಬಂದಿ ವರ್ಗದವರಿಗೆ ತಾ.ಪಂ ಮಾಹಿತಿ ಮತ್ತು ಶಿಕ್ಷಣ ಸಂಯೋಜಕ ಸುರೇಶ ಬಾಳಿಕಾಯಿ ಮತದಾನ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ನಗರದ ಪುರಸಭೆ ಮುಖ್ಯ ಕಚೇರಿಯಿಂದ ಮತದಾನ ಜಾಗೃತಿ ಜಾಥಾ ಆರಂಭವಾಗಿ ನಗರದ ಟಿಎಂಸಿ ರೋಡ್, ಸರ್ವಜ್ಞ ಸರ್ಕಲ್, ಹುಬ್ಬಳ್ಳಿ-ಬಿಜಾಪುರ ಹೆದ್ದಾರಿ ಮೂಲಕ ಸಂಚರಿಸಿ ನಗರದ ಶಿವಾಜಿ ಸರ್ಕಲ್‌ವರೆಗೆ ಸಾಗಿತು.
ಜಾಥಾದಲ್ಲಿ ನರಗುಂದ ಚುನಾವಣಾಧಿಕಾರಿ ಡಾ. ಹಂಪಣ್ಣ ಸಜ್ಜನ ತಾ.ಪಂ ಸಿಬ್ಬಂದಿ ವರ್ಗ, MRW, VRW ಕಾರ್ಯಕರ್ತರು ಹಾಜರಿದ್ದರು.
ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ತಾ.ಪಂ ನರಗುಂದದ ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ ಬಿರಾದಾರ ಮಾತನಾಡಿ, ಸಾರ್ವಜನಿಕರು ಮತದಾನದಿಂದ ತಪ್ಪಿಸಿಕೊಳ್ಳದೇ ತಮ್ಮ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಕಡ್ಡಾಯವಾಗಿ ಮತ ಚಲಾಯಿಸಿಬೇಕೆಂದು ತಿಳಿಸಿದರು.