ವಿಜಯಸಾಕ್ಷಿ ಸುದ್ದಿ, ಗದಗ : ಲೋಕಸಭಾ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ (ಸ್ವೀಪ್) ವತಿಯಿಂದ ಮತದಾನದ ಮಹತ್ವ ಕುರಿತು ಜಾಗೃತಿ ಜಾಥಾ ನಡೆಯಿತು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಶಿಕ್ಷಕರು, ಸಿಬ್ಬಂದಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು. ನನ್ನ ಮತ ನನ್ನ ಹಕ್ಕು, ಮತದಾನ ಮಾಡುವವರೇ ರಾಜ, ಅಮಿಷಕ್ಕೆ ಮರುಳಾಗದಿರಿ-ಯೋಚಿಸಿ ಮತ ಹಕ್ಕು ಚಲಾಯಿಸಿ, ನಿಮ್ಮ ಮತ-ನಿಮ್ಮ ಭವಿಷ್ಯ ಹೀಗೆ ಹಲವು ಘೋಷವಾಕ್ಯಗಳು ಜಾಥಾದಲ್ಲಿ ಮೊಳಗಿದವು.
ನಗರದ ಮುನ್ಸಿಪಲ್ ಪ್ರೌಢಶಾಲಾ ಆವರಣದಲ್ಲಿ ಜಾಥಾಗೆ ಜಿಲ್ಲಾ ಪಂಚಾಯತ್ ಸಿಇಓ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷರಾದ ಎಸ್. ಭರತ್ ಚಾಲನೆ ನೀಡಿದರು. ನಗರದ ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ಏರ್ಪಡಿಸಿ ಮತದಾನದ ಮಹತ್ವದ ಕುರಿತು ಸಂದೇಶ ಸಾರಿದರು. ರೋಟರಿ ವೃತ್ತ, ಭೂಮರಡ್ಡಿ ವೃತ್ತ, ಜಿಲ್ಲಾಧಿಕಾರಿಯವರ ಹಳೇ ಕಚೇರಿ ವೃತ್ತದಲ್ಲಿ ಮಾನವ ಸರಪಳಿ ಏರ್ಪಡಿಸಿ ಮತದಾನದ ಮಹತ್ವ ಕುರಿತು ಅರಿವು ಮೂಡಿಸಲಾಯಿತು.
ಜಿ.ಪಂ ಸಿಇಓ ಎಸ್. ಭರತ್ ಮಾತನಾಡಿ, 18 ವರ್ಷ ಪೂರ್ಣಗೊಂಡ ಎಲ್ಲಾ ಅರ್ಹರು ಕಡ್ಡಾಯವಾಗಿ ಮತದಾನ ಮಾಡುವಂತಾಗಬೇಕು. ಮತದಾನದಿಂದ ಅರ್ಹರು ಯಾವುದೇ ಕಾರಣಕ್ಕೂ ವಂಚಿತರಾಗಬಾರದು. ಪ್ರಜಾಪ್ರಭುತ್ವ ಬಲಪಡಿಸುವಲ್ಲಿ ಮತದಾನ ಅತೀ ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಅರ್ಹರೆಲ್ಲರೂ ಮತದಾನ ಮಾಡುವಂತಾಗಬೇಕೆಂದು ಕೋರಿದರು.
ಭಾಗವಹಿಸಿರುವ ಪ್ರತಿಯೊಬ್ಬರೂ ಕೈಯಲ್ಲಿ ಕಡ್ಡಾಯ ಮತದಾನ ಘೋಷವಾಕ್ಯದ ಪ್ಲೇಕಾರ್ಡ್ಗಳನ್ನು ಹಿಡಿದು ಸಾರ್ವಜನಿಕರಿಗೆ ಕಡ್ಡಾಯವಾಗಿ ಮತದಾನ ಮಾಡುವಂತೆ ಪ್ರೇರೇಪಿಸಿದರು. ಉಪ ವಿಭಾಗಾಧಿಕಾರಿ ವೆಂಕಟೇಶ್ ನಾಯ್ಕ್, ಜಿ.ಪಂ ಯೋಜನಾ ನಿರ್ದೇಶಕ ಜಗದೇವಪ್ಪ, ತಾ.ಪಂ ಇಓ ಮಾಣಿಕರಾವ್ ಪಾಟೀಲ, ಕ್ಷೇತ್ರ ಶಿಕ್ಷಣಾಧಿಕಾರಿ ಮುಂತಾದವರಿದ್ದರು.