ವಿಜಯಸಾಕ್ಷಿ ಸುದ್ದಿ, ಗದಗ : ಹುಲಕೋಟಿ ಶಿಕ್ಷಣ ಸಂಸ್ಥೆಯ ಕಾನೂನು ಮಹಾವಿದ್ಯಾಲಯದ ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡಾ ಹಾಗೂ ಎನ್.ಎಸ್.ಎಸ್. ಚಟುವಟಿಕೆಗಳ ಸಮಾರೋಪ ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಪೊಲೀಸ್ ವರಿಷ್ಠಾಧಿಕಾರಿ ಬಿ.ಎ. ನೇಮಗೌಡ ಮಾತನಾಡಿ, ಪೊಲೀಸರು ಮತ್ತು ವಕೀಲರು ಒಂದೇ ಸಮಾಜದ ಮುಖ್ಯ ವಿಭಾಗಗಳು. ಎಲ್ಲರೂ ಒಟ್ಟಿಗೆ ಶ್ರಮಿಸಿ ಕೆಲಸ ಮಾಡಿದಾಗ ಮಾತ್ರ ಸಮಾಜ ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ. ಶಿಸ್ತು, ಸಮಯ ಪಾಲನೆ ವಿದ್ಯಾರ್ಥಿ ಜೀವನದ ಅತ್ಯವಶ್ಯಕ ಅಂಶಗಳು ಎಂದು ತಿಳಿಸಿದರು.
ಯುವ ಮುಖಂಡ ಕೃಷ್ಣಗೌಡ ಎಚ್.ಪಾಟೀಲ ಮಾತನಾಡಿ, ಜಗತ್ತಿನಲ್ಲಿ ತನ್ನ ವ್ಯಕ್ತಿತ್ವ ಗುರುತಿಸಿಕೊಳ್ಳುವುದು ಅತ್ಯವಶ್ಯಕ ಹಾಗೂ ಇಂದಿನ ದಿನಗಳಲ್ಲಿ ತಾಂತ್ರಿಕತೆಯ ಜ್ಞಾನದ ಅರಿವು ಪ್ರತಿಯೊಬ್ಬ ವಿದ್ಯಾರ್ಥಿಗೆ ಇರುವುದು ಮುಖ್ಯ ಎಂದರು.
ಸಂಸ್ಥೆಯ ಅಧ್ಯಕ್ಷ ರವಿ ಮೂಲಿಮನಿ ಮಾತನಾಡಿ, ಜೀವನದಲ್ಲಿ ಕಾನೂನು ಅರಿವು ಪ್ರತಿಯೊಬ್ಬ ಪ್ರಜೆಗೆ ಅತ್ಯಗತ್ಯ ಎಂದರಲ್ಲದೆ, ಅಂತಿಮ ವರ್ಷದ ಕಾನೂನು ವಿದ್ಯಾರ್ಥಿಗಳಿಗೆ ಒಳ್ಳೆಯ ವಕೀಲರಾಗುವಂತೆ ಆಶಿಸಿದರು.
ಕಾನೂನು ಮಹಾವಿದ್ಯಾಲಯದ ಅಧ್ಯಕ್ಷ ಎಸ್.ಕೆ. ಪಾಟೀಲ ಮಾತನಾಡಿ, ಓದಿನೊಂದಿಗೆ ವಿದ್ಯಾರ್ಥಿಗಳು ಕ್ರೀಡೆ, ಸಾಂಸ್ಕೃತಿಕ ಇತರೆ ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸಲು ತಿಳಿಸಿದರು.
ಸಮಾರಂಭದಲ್ಲಿ ಮಹಾವಿದ್ಯಾಲಯದ ಉಪಾಧ್ಯಕ್ಷ ಎಸ್.ಕೆ. ನದಾಫ್, ಪ್ರಾಚಾರ್ಯರಾದ ಪಲ್ಲವಿ ಬುಯ್ಯಾರ, ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಎಸ್‌ಪಿ ಬಿ.ಎಸ್. ನೇಮಗೌಡ, ಕೃಷ್ಣಗೌಡ ಎಚ್.ಪಾಟೀಲ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ವರ್ಷದ ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿಯನ್ನು ಯಶ್ ರೈಕರ, ಪ್ರೇಮಲೇಖ ಹಾಗೂ ಶೇಖರ ಇವರಿಗೆ ನೀಡಲಾಯಿತು.