ಕೋಲಾರ:- ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಬಗ್ಗೆ ಅವಹೇಳನಕಾರಿಯಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿದ್ದನ್ನು ಖಂಡಿಸಿ ವಿವಿಧ ಪ್ರಗತಿಪರ ಸಂಘಟನೆಗಳ ಸಮಿತಿ ಇಂದು ಕೋಲಾರ ಬಂದ್‌ಗೆ ಕರೆ ಕೊಟ್ಟಿದೆ.
ಇಂದು ಕೋಲಾರ ಬಂದ್ ಹಿನ್ನೆಲೆ, ಪ್ರತಿಭಟನಾಕಾರರು ಬೆಳ್ಳಂ ಬೆಳಿಗ್ಗೆ ರಸ್ತೆಗಿಳಿದು ಕೇಂದ್ರ ಗೃಹ ಸಚಿವರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ನಗರದ ಶ್ರೀನಿವಾಸಪುರ ಸರ್ಕಲ್ ನಲ್ಲಿ ಟೈಯರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ kSRTC ಬಸ್ ಡಿಪೋ ಗೆ ಬೀಗ ಹಾಕಿ ಬಸ್ ಗಳು ತೆರಳದಂತೆ ಹೋರಾಟಗಾರರು ಅಡ್ಡಿ ಮಾಡಿದ್ದು, ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನಗಳನ್ನು ತಡೆದು ವಾಪಸ್ ಹೋಗುವಂತೆ ಪ್ರತಿಭಟನಾಕಾರರು ಮನವಿ ಮಾಡಿದ್ದಾರೆ.
ಕೂಡಲೇ ಗೃಹ ಸಚಿವ ಪದವಿಗೆ ಅಮಿತ್ ಶಾ ರಾಜೀನಾಮೆ ನೀಡಲು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಇನ್ನೂ ಪ್ರಗತಿ ಪರ ಸಂಘಟನೆಗಳು ಒಗ್ಗೂಡಿ ಕೊಟ್ಟಿರುವ ಬಂದ್ ಗೆ ದಲಿತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ರೈತ ಸಂಘ, ಮುಸ್ಲಿಂ ಸಮುದಾಯ ಸೇರಿದಂತೆ ಅನೇಕ ಸಂಘಟನೆಗಳು ಬೆಂಬಲ ಕೊಟ್ಟಿವೆ.
ಪ್ರತಿಭಟನೆ ಹಿನ್ನೆಲೆ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಬಂದ್ ಯಶಸ್ವಿಗೆ ಬೆಳಗ್ಗಿನಿಂದಲೇ ಪ್ರತಿಭಟನಾ ಕಾರರು ರಸ್ತೆಗೆ ಇಳಿದು, ಯಾವುದೇ ವಾಹನ ಸಂಚರಿಸದಂತೆ ರಸ್ತೆಗೆ ಅಡ್ಡಲಾಗಿ ಬೈಕ್ ನಿಲ್ಲಿಸಿದ್ದಾರೆ.
ಬಂದ್ ಹಿನ್ನೆಲೆ, ಬಸ್ ನಿಲ್ದಾಣ ಖಾಲಿ ಹೊಡೆಯುತ್ತಿದ್ದು, ಒಂದೇ ಒಂದು ಆಟೋಗಳು ರಸ್ತೆಯಲ್ಲಿ ಕಂಡು ಬಂದಿಲ್ಲ. ನಗರದಲ್ಲೆಡೆ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಯಾವುದೇ ಅಹಿತಕರ ಘಟನೆ ಸಂಭವಿಸಿದಂತೆ ನಗರಾದ್ಯಂತ ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದಾರೆ.