ವಿಜಯಸಾಕ್ಷಿ ಸುದ್ದಿ, ಗದಗ: ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿಯವರಿಗೆ ವಕೀಲನೊಬ್ಬ ಶೂ ಎಸೆದು ಅವಮಾನ ಮಾಡಿರುವ ಘಟನೆಯನ್ನು ದಲಿತ ಯುವ ಸೇನಾ ಸಮಿತಿ ಖಂಡಿಸಿದ್ದು, ನ್ಯಾಯಾಲಯಕ್ಕೆ ಅವಮಾನ ಮಾಡಿದ ವಕೀಲನನ್ನು ಕೂಡಲೇ ಬಂಧಿಸಿ ಕಾನೂನು ಕ್ರಮವನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದೆ.
ಸಮಿತಿಯ ಗದಗ ಜಿಲ್ಲಾಧ್ಯಕ್ಷ ವಿಜಯ ಎಸ್. ಮುಳಗುಂದ ನೇತೃತ್ವದಲ್ಲಿ ಗದಗ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿ, ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆದು ಪರಸ್ಪರ ದ್ವೇಷ ಮತ್ತು ಅಸಹನೆಯನ್ನು ಹುಟ್ಟುಹಾಕಿರುವ ವಿಕೃತ ಮನಸ್ಸುಗಳು ಇವತ್ತು ದೇಶದಲ್ಲಿ ವಿಜೃಂಭಿಸುತ್ತಿವೆ. ಕೆಲವರು ಪುಂಡರ ಜೊತೆ ಸೇರಿ ವಕೀಲನ ದುಷ್ಕೃತ್ಯವನ್ನು ಸಂಭ್ರಮಿಸುವುದನ್ನು ಕಾಣುತ್ತಿದ್ದೇವೆ. ಇಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ಅಗತ್ಯವಿದೆ ಎಂದರು.
ಈ ಸಂದರ್ಭದಲ್ಲಿ ವೆಂಕಟೇಶ ಎಚ್. ಬಳ್ಳಾರಿ, ಮೋಹನ ಭಜಂತ್ರಿ, ಸಣ್ಣವೆಂಕಟೇಶ ಬಿಂಕದಕಟ್ಟಿ, ಸಂಜೀವ ಗಂಗಾವತಿ ಕೊರವರ, ದ್ಯಾಮಣ್ಣ ಬಿಜಾಪೂರ, ಬಸವರಾಜ ಸತ್ಯಮ್ಮನವರ, ಮಲ್ಲಪ್ಪ ಸಣ್ಣಕ್ಕಿ, ಲಕ್ಷ್ಮಣ ಸಣ್ಣಕ್ಕಿ, ವಿನಾಯಕ ಹೊಸಳ್ಳಿ, ನಾಗರಾಜ ಸಾಸ್ವಹಳ್ಳಿ, ತಾನುಜ ದೊಡ್ಡಮನಿ, ಗಂಗಪ್ಪ ಹೆಬ್ಬಳ್ಳಿ, ಲಿಂಗರಾಜ ದೊಡ್ಡಮನಿ, ಕಿರಣ ಮಿಸ್ರಿಕೋಟಿ, ವಿಜಯ ಚಲವಾದಿ, ಅಶೋಕ ತಾಳದ ಮುಂತಾದವರಿದ್ದರು.



