ವಿಜಯಸಾಕ್ಷಿ ಸುದ್ದಿ, ಗದಗ : ಸೋಮವಾರ ಗಜೇಂದ್ರಗಡದಲ್ಲಿ ನಡೆದ ಬಿಜೆಪಿ ಪ್ರತಿಭಟನೆಯ ವೇಳೆ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಲು ಆಗಮಿಸಿದ ತಾಲೂಕು ದಂಡಾಧಿಕಾರಿಗಳೂ ಆಗಿರುವ ತಹಸೀಲ್ದಾರ ಕಿರಣಕುಮಾರ ಕುಲಕರ್ಣಿ ಅವರನ್ನು ಸಾರ್ವಜನಿಕವಾಗಿಯೇ ವೈಯಕ್ತಿಕವಾಗಿ ಏಕವಚನದಿಂದ ನಿಂದಿಸಿದ ಮಾಜಿ ಶಾಸಕ ಕಳಕಪ್ಪ ಬಂಡಿ ಅವರ ನಡೆಯನ್ನು ಕರ್ನಾಟಕ ಸರ್ಕಾರಿ ಕಂದಾಯ ಇಲಾಖೆ ನೌಕರರ ಸಂಘದ ಗದಗ ಜಿಲ್ಲಾ ಘಟಕ ತೀವ್ರವಾಗಿ ಖಂಡಿಸಿದೆ.
ಈ ಕುರಿತು ಸಂಘದ ಜಿಲ್ಲಾಧ್ಯಕ್ಷ ಡಿ.ಟಿ. ವಾಲ್ಮೀಕಿ ನೇತೃತ್ವದಲ್ಲಿ ಮಂಗಳವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ವಕ್ಫ್ ನಡೆ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯದ ಎಲ್ಲ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆಗೆ ಕರೆ ನೀಡಿತ್ತು. ಇದರ ಭಾಗವಾಗಿ ಗಜೇಂದ್ರಗಡದಲ್ಲೂ ಪ್ರತಿಭಟನೆ ನಡೆದಿದೆ. ಆದರೆ, ಪ್ರತಿಭಟನೆ ನಂತರ ಮನವಿ ಸ್ವೀಕರಿಸಲು ಆಗಮಿಸಿದ ತಹಸೀಲ್ದಾರ ಕಿರಣಕುಮಾರ ಕುಲಕರ್ಣಿ ಅವರನ್ನು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಾಜಿ ಶಾಸಕ ಕಳಕಪ್ಪ ಬಂಡಿ ಸಾರ್ವಜನಿಕವಾಗಿಯೇ ವೈಯಕ್ತಿಕವಾಗಿ ಏಕವಚನದಿಂದ ನಿಂದಿಸಿದ್ದಾರೆ. ಅಲ್ಲದೆ, ಕಂದಾಯ ಇಲಾಖೆಯ ಅಧಿಕಾರಿ/ನೌಕರರಿಗೆ ಸರ್ಕಾರಿ ಕರ್ತವ್ಯ ನಿರ್ವಹಿಸಲು ತೊಂದರೆಯುಂಟು ಮಾಡಿದ್ದಾರೆ ಎಂದು ಆರೋಪಿಸಿದರು.
ಸರ್ಕಾರದ ನಿಯಮಗಳಿಗೆ ಅನುಗುಣವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕಂದಾಯ ಇಲಾಖೆಯ ಅಧಿಕಾರಿ/ನೌಕರರಿಗೆ ತೊಂದರೆ ನೀಡಿ, ನಿಷ್ಪಕ್ಷಪಾತವಾಗಿ ಸರ್ಕಾರಿ ಕರ್ತವ್ಯ ನಿರ್ವಹಿಸಲು ಮಾನಸಿಕವಾಗಿ ಮತ್ತು ನೈತಿಕವಾಗಿ ಕುಗ್ಗಿಸುವ ರೀತಿಯಲ್ಲಿ ನಡೆದುಕೊಂಡಿದ್ದು ಖೇದಕರ. ಪ್ರತಿದಿನ ಸಾರ್ವಜನಿಕ ಸೇವೆಯಲ್ಲಿ ನಿರತರಾಗಿರುವ ಇಲಾಖೆಯ ಅಧಿಕಾರಿ ಹಾಗೂ ನೌಕರರಿಗೆ ಸೂಕ್ತ ರಕ್ಷಣೆಯನ್ನು ಒದಗಿಸಬೇಕು. ಜೊತೆಗೆ ಸರ್ಕಾರಿ ಕರ್ತವ್ಯ ನಿರ್ವಹಿಸಲು ತೊಂದರೆಯುಂಟು ಮಾಡಿದ ಮಾಜಿ ಶಾಸಕ ಕಳಕಪ್ಪ ಬಂಡಿ ಅವರ ವಿರುದ್ಧ ಸಕಾರದ ನಿಯಮದನ್ವಯ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಮನವಿಯನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಗದಗ ತಹಸೀಲ್ದಾರ ಶ್ರೀನಿವಾಸಮೂರ್ತಿ ಕುಲಕರ್ಣಿ, ಕರ್ನಾಟಕ ಸರ್ಕಾರಿ ಕಂದಾಯ ಇಲಾಖೆ ನೌಕರರ ಸಂಘದ ಗದಗ ಜಿಲ್ಲಾ ಘಟಕದ ಗೌರವ ಅಧ್ಯಕ್ಷ ಎಸ್.ಎಂ. ಹಿರೇಮಠ, ಪ್ರಧಾನ ಕಾರ್ಯದರ್ಶಿ ಎಫ್.ಎಸ್. ಗೌಡರ, ಉಪಾಧ್ಯಕ್ಷ ಬಿ.ಎಸ್. ಕನ್ನೂರ, ಎಂ.ಎ. ನದಾಫ್, ಖಜಾಂಚಿ ಕೆ.ಎಚ್. ಓಲೇಕಾರ, ಸಲಹಾ ಸಮಿತಿ ಅಧ್ಯಕ್ಷ ಎನ್.ಐ. ದೊಡ್ಡಮನಿ, ರಾಜ್ಯ ಪರಿಷತ್ ಸದಸ್ಯರಾದ ಎಸ್.ಎಸ್. ಕಡಗದ, ಬಿ.ವಿ. ಕಾಸಾರ, ಜಂಟಿ ಕಾರ್ಯದರ್ಶಿ ಎಂ.ವಿ. ಪೊಲೀಸಪಾಟೀಲ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಸ್.ಸಿ. ಹೊಸಕೋಟಿ, ಮಹಿಳಾ ಸಂಘಟನಾ ಕಾರ್ಯದರ್ಶಿ ಜಿ.ಬಿ. ಆನಂದಪ್ಪನವರ, ಸಾಂಸ್ಕೃತಿಕ ಕಾರ್ಯದರ್ಶಿ ಜಿ.ಪಿ. ಪಾಟೀಲ, ಕ್ರೀಡಾ ಕಾರ್ಯದರ್ಶಿ ಜೆ.ಎಚ್. ಭಜಂತ್ರಿ, ಆರ್.ವಾಯ್. ವಿಕ್ರಂ, ಸಹ-ಕಾರ್ಯದರ್ಶಿಗಳಾದ ವಿವೇಕ ಎಸ್.ಡಿಸ್ಲೆ, ಎಸ್.ಎ. ಪಾಟೀಲ, ಅರುಣಗೌಡ ಬಿ.ಮಂಟೂರ ಸೇರಿ ಅನೇಕರು ಇದ್ದರು.
ಶಾಸಕ-ಸಚಿವರಾಗಿದ್ದವರು, ಸಾರ್ವಜನಿಕ ಜೀವನದಲ್ಲಿದ್ದವರು ಅಧಿಕಾರಿಗಳೊಂದಿಗೆ, ಅದರಲ್ಲೂ ತಾಲೂಕು ದಂಡಾಧಿಕಾರಿಗಳೊAದಿಗೆ ನಡೆದುಕೊಂಡ ರೀತಿ ಖಂಡನೀಯ. ಇಂತಹ ಘಟನೆ ಯಾವುದೇ ಅಧಿಕಾರಿ ಅಥವಾ ನೌಕರರ ಮೇಲೆ ಮರುಕಳಿಸದಂತೆ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ್ದೇವೆ.
– ಡಿ.ಟಿ. ವಾಲ್ಮೀಕಿ.
ಕರ್ನಾಟಕ ಸರ್ಕಾರಿ ಕಂದಾಯ ಇಲಾಖೆ ನೌಕರರ ಸಂಘದ ಜಿಲ್ಲಾಧ್ಯಕ್ಷ.