ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ಕೋಲ್ಕತ್ತಾ ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ ಖಂಡಿಸಿ, ವೈದ್ಯರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಆಗ್ರಹಿಸಿ ತಾಲೂಕಾ ವೈದ್ಯರ ಸಂಘ ಹಾಗೂ ಔಷಧ ವ್ಯಾಪಾರಸ್ಥರ ಸಂಘದಿಂದ ತಹಸೀಲ್ದಾರರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಎಸ್.ಎಂ. ಬುರಬುರೆ, ಕೋಲ್ಕತಾದ ವೈದ್ಯಕೀಯ ಮಹಾವಿದ್ಯಾಲಯದ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಬರ್ಬರ ಕೊಲೆಯ ಘಟನೆ ವೈದ್ಯ ಸಮೂಹದಲ್ಲಿ ಭಯದ ವಾತಾವರಣ ಹುಟ್ಟಿಸಿದೆ. ವೈದ್ಯಕೀಯ ಕಾಲೇಜು, ಆಸ್ಪತ್ರೆಯಲ್ಲಿ ಸಹ ಮಹಿಳಾ ವೈದ್ಯರಿಗೆ ರಕ್ಷಣೆ ಇಲ್ಲದಂತಾಗಿದೆ. ಇದನ್ನು ಖಂಡಿಸಿ ತಾಲೂಕಾ ವೈದ್ಯರ ಸಂಘ, ಔಷಧ ವ್ಯಾಪಾರಸ್ಥರು ತಮ್ಮ ಕರ್ತವ್ಯವನ್ನು ಬಂದ್ ಮಾಡಿ ಪ್ರತಿಭಟನೆಗೆ ಬೆಂಬಲ ಕೊಡುತ್ತಿದ್ದೇವೆ. ಈ ಸಮಯದಲ್ಲಿ ಸಾರ್ವಜನಿಕರು ಸಹಕರಿಸಬೇಕು.
ಮುಂಬರುವ ದಿನಗಳಲ್ಲಿ ಇಂತಹ ಘಟನೆಗಳು ಜರುಗದಂತೆ ವೈದ್ಯರೂ ಸೇರಿದಂತೆ ವಿಶೇಷವಾಗಿ ಮಹಿಳಾ ವೈದ್ಯರಿಗೆ ಸೂಕ್ತ ರಕ್ಷಣೆ ನೀಡಲು ಕ್ರಮ ಕೈಕೊಳ್ಳಬೇಕೆಂದು ಮನವಿ ಸಲ್ಲಿಸಿದರು.
ಡಾ. ಬಸವರಾಜ ಹಳ್ಳೆಮ್ಮನವರ, ಡಾ. ಗೋಪಾಲರಾಜ, ಡಾ. ಪವನ ಮಹೇಂದ್ರಕರ, ಡಾ. ಪವನ ಫಾಯದೆ, ಡಾ. ಪ್ರಸಾದ ಮಹೇಂದ್ರಕರ, ಡಾ. ಎ.ಎಂ. ಢಾಲಾಯತ, ಡಾ. ಗೋನಾಳ, ಪವನ ನರಗುಂದ, ಗುಲಾಬಶಾ ಮಕಾನದಾರ, ಭೂಪಾಲ ಆಲೂರ, ಕೊಪ್ಪದ ಮುಂತಾದವರು ಉಪಸ್ಥಿತರಿದ್ದರು.