ವಿಜಯಸಾಕ್ಷಿ ಸುದ್ದಿ, ಗದಗ: ಕಾಶ್ಮೀರದ ಅನಂತನಾಗ್ ಜಿಲ್ಲೆಯ ಬೈಸರನ್‌ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ಮಂಗಳವಾರ ಏಕಾಏಕಿ ನಡೆಸಿ ಒಟ್ಟು 28 ಜನ ಪ್ರವಾಸಿಗರನ್ನು ಗುಂಡಿಕ್ಕಿ ಕೊಂದಿದ್ದಾರೆ. ಪತ್ನಿಯ ಎದುರಲ್ಲಿಯೇ ಪತಿಯನ್ನು ಕೊಂದು ಅಟ್ಟಹಾಸ ಮೆರೆದಿರುವ ಭಯೋತ್ಪಾದಕರಿಗೆ ಗಲ್ಲು ಶಿಕ್ಷೆ ಆಗಲಿ ಎಂದು ನಗರಸಭೆಯ ಸ್ಥಾಯಿ ಕಮಿಟಿಯ ಮಾಜಿ ಅಧ್ಯಕ್ಷ ಎಮ್.ಸಿ. ಶೇಖ ಘಟನೆಯನ್ನು ಖಂಡಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಇಸ್ಲಾಂ ಧರ್ಮದಲ್ಲಿ ಇಂತಹ ಕೃತ್ಯಕ್ಕೆ ಅವಕಾಶವಿಲ್ಲ. ಇಸ್ಲಾಂ ಧರ್ಮವು ಭಯೋತ್ಪಾದನೆಯನ್ನು ಖಂಡಿಸುತ್ತದೆ. ಇಸ್ಲಾಂ ಧರ್ಮವು ಪರಧರ್ಮವನ್ನು ಪ್ರೀತಿಯಿಂದ ಕಾಣಬೇಕೆಂದು ಕಲಿಸುತ್ತದೆ. ದಯಾಗುಣನಾದ ಆ ಭಗವಂತನು ನೀನು ಭೂಮಿಯ ಮೇಲಿರುವವರನ್ನು ಕರುಣಿಸು, ನಾನು ನಿನ್ನನ್ನು ಕರುಣಿಸುತ್ತೇನೆ ಎಂದು ಹೇಳುತ್ತದೆ. ಇಂಥಹ ಇಸ್ಲಾಂ ಧರ್ಮಕ್ಕೆ ಅಪಪ್ರಚಾರ ಮಾಡುವ ಭಯೋತ್ಪಾದಕರಿಗೆ ಗಲ್ಲು ಶಿಕ್ಷೆಯಾಗಲಿ ಎಂದು ಅವರು ಹೇಳಿಕೆ ನೀಡಿದ್ದಾರೆ.