ವಿಜಯಸಾಕ್ಷಿ ಸುದ್ದಿ, ಗದಗ: ದಸರಾ ಹಬ್ಬಕ್ಕೆ ಪ್ರತಿ ವರ್ಷ ಸರ್ಕಾರಿ ರಜೆ ಘೋಷಿಸಲಾಗುತ್ತದೆ. ಆದರೆ, ಗದಗ ನಗರದಲ್ಲಿರುವ ಕೆಲವು ಖಾಸಗಿ ಶಾಲೆಗಳು ರಜೆ ಘೋಷಿಸದೇ ಸರ್ಕಾರಿ ಆದೇಶ ಗಾಳಿಗೆ ತೂರಿದ ಆರೋಪದ ಹಿನ್ನೆಲೆಯಲ್ಲಿ ಶಿವರಾಮಕೃಷ್ಣ ಸೇವಾ ಸಮಿತಿಯ ಪದಾಧಿಕಾರಿಗಳು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಈ ಬಗ್ಗೆ ಶಾಲಾ ಆಡಳಿತ ಮಂಡಳಿಯವರನ್ನು ಪ್ರಶ್ನಿಸಿದಾಗ ಸಮಿತಿ ಕಾರ್ಯಕರ್ತರಿಗೆ ಜಾತಿ ನಿಂದನೆ ಮಾಡಿ, ಸುಳ್ಳು ಪ್ರಕರಣ ದಾಖಲಿಸಿ ಜೈಲಿಗೆ ಅಟ್ಟುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿ ಮುಳುಗುಂದ ನಾಕಾದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪಾದಯಾತ್ರೆಯ ಮೂಲಕ ತೆರಳಿ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ರಾಜು ಖಾನಪ್ಪನವರ, ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಇಡೀ ವಿಶ್ವಕ್ಕೆ ಮಾದರಿಯಾಗುವ ಸಂವಿಧಾನವನ್ನು ರಚಿಸಿ ದೇಶಕ್ಕೆ ನೀಡಿದ್ದಾರೆ. ಭಾರತದಲ್ಲಿರುವ ಎಲ್ಲ ಜಾತಿ, ಧರ್ಮದ ಜನತೆ ಸಂವಿಧಾನದಡಿಯಲ್ಲಿಯೇ ಕಾರ್ಯನಿರ್ವಹಿಸಬೇಕು ಎಂದು ಕಡ್ಡಾಯಗೊಳಿಸಲಾಗಿದೆ. ದೇಶದಲ್ಲಿರುವ ಎಲ್ಲ ಶಾಲೆ, ಕಾಲೇಜು, ಸರಕಾರಿ, ಅರೆ ಸರಕಾರಿ ಕಚೇರಿಗಳಲ್ಲಿ ಅಂಬೇಡ್ಕರ್‌ರ ಭಾವಚಿತ್ರ ಅಳವಡಿಸುವದನ್ನು ಕಡ್ಡಾಯಗೊಳಿಸಿದೆ.
ಅಲ್ಪಸಂಖ್ಯಾತರ ಶಾಲೆಯ ಹೆಸರಿನಲ್ಲಿ ಸರಕಾರಿ ಸೌಲಭ್ಯಗಳನ್ನು ಪಡೆಯುತ್ತಿರುವ ನಗರದ ಲೋಯಲಾ ಕಾನ್ವೆಂಟ್, ಸೇಂಟ್ ಜೋನ್ಸ್ ಶಾಲೆಗಳಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್‌ರ ಭಾವಚಿತ್ರಗಳನ್ನು ಅಳವಡಿಸಿಲ್ಲ. ಈ ಬಗ್ಗೆ ಪ್ರಶ್ನಿಸಿದ ದಲಿತ ಸಂಘಟನೆಗಳ ಸದಸ್ಯರೊಂದಿಗೆ ಪ್ರಿನ್ಸಿಪಾಲ್ ಮತ್ತು ಇತರೆ ಸಿಬ್ಬಂದಿ ಕೆಟ್ಟದಾಗಿ ನಡೆದುಕೊಂಡಿದ್ದಾರೆ. ಭಾವಚಿತ್ರ ಅಳವಡಿಸದ ಬಗ್ಗೆ ಪ್ರಶ್ನಿಸಿದ ಜನರಿಗೆ ಚಪ್ಪಲಿಯಿಂದ ಹೊಡೆದು ಜಾತಿ ನಿಂದನೆ ಮಾಡಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.
ಪ್ರಕರಣಕ್ಕೆ ಸಂಬಂಧಿಸಿ, ಶಾಲೆಗಳ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು ಪ್ರಶ್ನಿಸಿದವರ ಮೇಲೆಯೇ ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಶಾಲೆಯಲ್ಲಿ ದೊಂಬಿ ನಿರ್ಮಿಸಿದ್ದಾರೆಂಬ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಟಗೇರಿ ಪೊಲೀಸರು 6 ಜನರನ್ನು ಬಂಧಿಸಿದ್ದಾರೆ. ಇದು ಸಂವಿಧಾನ ಹಾಗೂ ದೇಶದ ಸಮಸ್ತ ದಲಿತರಿಗೆ ಮಾಡಿದ ಅವಮಾನವಾಗಿದೆ. ಈ ಘಟನೆಯನ್ನು ನಮ್ಮ ಸಂಘಟನೆ ಉಗ್ರವಾಗಿ ಖಂಡಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಜಗದೀಶ್ ಎಸ್.ಪಿ, ಮುಖಂಡರಾದ ಮಹೇಶ್ ರೋಖಡೆ, ಶಿವಯೋಗಿ ಹಿರೇಮಠ, ಕಿರಣ್ ಹಿರೇಮಠ, ಸೋಮು ಗುಡಿ, ಕುಮಾರ್ ನಡಿಗೇರಿ, ವಿಶ್ವನಾಥ ಶೀರಿ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಶಾಲಾ ಆಡಳಿತ ಮಂಡಳಿಯವರು ಸರ್ಕಾರಿ ಆದೇಶ ಗಾಳಿಗೆ ತೂರಿದ್ದನ್ನು ಪ್ರಶ್ನಿಸಿದಾಗ ನಮ್ಮ ಕಾರ್ಯಕರ್ತರ ಮೇಲೆಯೇ ಜಾತಿ ನಿಂದನೆ ಮಾಡಿದ್ದಾರೆ. ಈ ಬಗ್ಗೆ ಬೆಟಗೇರಿ ಠಾಣೆಯಲ್ಲಿ ದೂರು ದಾಖಲಿಸಿದರೂ ಬಂಧಿಸುವ ಕೆಲಸ ಆಗಿಲ್ಲ. ಆದರೆ, ಆಡಳಿತ ಮಂಡಳಿಯವರ ಸುಳ್ಳು ದೂರು ದಾಖಲಿಸಿಕೊಂಡು ನಮ್ಮ ಕಾರ್ಯಕರ್ತರನ್ನು ಬಂಧಿಸಿ ಪೊಲೀಸರು ಒಂದು ಕಣ್ಣಿಗೆ ಬೆಣ್ಣೆ – ಮತ್ತೊಂದು ಕಣ್ಣಿಗೆ ಸುಣ್ಣ ಎರಚುವ ಕೆಲಸ ಮಾಡಿದ್ದಾರೆ.
– ರಾಜು ಖಾನಪ್ಪನವರ.
ಅಧ್ಯಕ್ಷರು, ಶಿವರಾಮಕೃಷ್ಣ ಸೇವಾ ಸಮಿತಿ.