ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯಲ್ಲಿ ಡಿಸೆಂಬರ್ 7 ಮತ್ತು 8ರಂದು ಕರ್ನಾಟಕ ಲೋಕಸೇವಾ ಆಯೋಗವು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯಲ್ಲಿನ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಕನ್ನಡ ಭಾಷಾ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆ ನಡೆಸುತ್ತಿದ್ದು, ಪರೀಕ್ಷೆಗಳನ್ನು ಸುವ್ಯವಸ್ಥಿತವಾಗಿ ಹಾಗೂ ಪಾರದರ್ಶಕವಾಗಿ ಜರುಗಿಸಬೇಕು ಹಾಗೂ ಪರೀಕ್ಷಾ ಅಕ್ರಮಕ್ಕೆ ಅವಕಾಶ ಇಲ್ಲ ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ 23 ಪರೀಕ್ಷಾ ಕೇಂದ್ರಗಳಲ್ಲಿ ಡಿಸೆಂಬರ್ 7ರಂದು ಮಧ್ಯಾಹ್ನ 2 ಗಂಟೆಯಿಂದ 4 ಗಂಟೆಯವರೆಗೆ, ಡಿಸೆಂಬರ್ 8ರಂದು ಬೆಳಿಗ್ಗೆ 10ರಿಂದ 11.3ರವರೆಗೆ ಹಾಗೂ ಮಧ್ಯಾಹ್ನ 2ರಿಂದ 4 ರವರೆಗೆ 26 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ಜರುಗುತ್ತಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ಗೋಡೆ ಗಡಿಯಾರಗಳು ಇರುವಂತೆ ನೋಡಿಕೊಳ್ಳಬೇಕು. ಪರೀಕ್ಷೆಗಳನ್ನು ಸುಗಮವಾಗಿ ನಡೆಸಲು ಪರೀಕ್ಷಾ ಕೇಂದ್ರಗಳಿಗೆ ವೀಕ್ಷಕರನ್ನು, ಸ್ಥಳೀಯ ನಿರೀಕ್ಷಣಾಧಿಕಾರಿಯನ್ನು, ಮಾರ್ಗಾಧಿಕಾರಿಗಳನ್ನು ಮತ್ತು ತ್ರಿ ಸದಸ್ಯ ಸಮಿತಿಯನ್ನು ನೇಮಿಸಲಾಗಿದೆ. ಅಧಿಕಾರಿಗಳು ತಮಗೆ ನಿಗದಿಪಡಿಸಿದ ಕರ್ತವ್ಯಗಳನ್ನು ನಿರ್ವಹಿಸಬೇಕೆಂದು ಸೂಚಿಸಿದರು.
ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಪರೀಕ್ಷೆ ಪ್ರಾರಂಭವಾಗುವುದಕ್ಕಿಂತ 10 ನಿಮಿಷ ಮುಂಚೆಯೇ ಹಾಜರಾಗಿರಬೇಕು. ಖ.7ರಂದು ಪರೀಕ್ಷೆಗಳು ಜರುಗುವ ಪರೀಕ್ಷಾ ಕೇಂದ್ರಗಳಲ್ಲಿನ ಶಾಲೆ-ಕಾಲೇಜುಗಳನ್ನು ಆ ದಿವಸದ ಮಟ್ಟಿಗೆ ರಜೆಯೆಂದು ಘೋಷಿಸಬೇಕು. ಮುಂದಿನ ದಿನಗಳಲ್ಲಿ ಆ ದಿನದ ಅಧ್ಯಯನ ಸರಿದೂಗಿಸಿಕೊಳ್ಳಬೇಕು. ವಿಕಲಚೇತನರಿಗೆ ನೆಲಮಹಡಿಯ ಪರೀಕ್ಷಾ ಕೇಂದ್ರಗಳಲ್ಲಿಯೇ ಪರೀಕ್ಷೆ ಬರೆಯುವ ವ್ಯವಸ್ಥೆಯಾಗಬೇಕು. ಒಟ್ಟಾರೆಯಾಗಿ ಯಾವುದೇ ಅಕ್ರಮ, ಲೋಪ-ದೋಷಗಳಿಗೆ ಆಸ್ಪದವಿಲ್ಲದಂತೆ ಪರೀಕ್ಷೆಯನ್ನು ಯಶಸ್ವಿಯಾಗಿ ಜರುಗಿಸಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಪರೀಕ್ಷಾ ಕೇಂದ್ರಗಳಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀಟರ್ ಪರಿಮಿತಿಯೊಳಗೆ ಡಿಸೆಂಬರ್ 7 ಮತ್ತು 8ರಂದು ಬೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಪ್ರತಿಬಂಧಕಾಜ್ಞೆ ಜಾರಿಗೊಳಿಸಲಾಗಿದೆ. ವಸ್ತ್ರಸಂಹಿತೆಯನ್ನೂ ಜಾರಿಗೊಳಿಸಿದ್ದು, ಶೂ-ಸಾಕ್ಸ್ ಗಳನ್ನು ಧರಿಸಲು ಅವಕಾಶವಿರುವುದಿಲ್ಲ. ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯೊಳಗೆ ಯಾವುದೇ ಆಧುನಿಕ ಉಪಕರಣಗಳು, ಮೊಬೈಲ್ ಬ್ಲೂಟೂತ್, ಕ್ಯಾಲ್ಕುಲೇಟರ್ ಇತ್ಯಾದಿಗಳನ್ನು ತೆಗೆದುಕೊಂಡು ಹೋಗಲು ಅವಕಾಶ ಇರುವುದಿಲ್ಲ ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರಡಿ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಎ.ಎ. ಕಂಬಾಳಿಮಠ, ಭೂ ದಾಖಲೆ ಇಲಾಖೆ ಉಪನಿರ್ದೇಶಕ ರುದ್ರಗೌಡ, ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ಮಹಾಂತೇಶ, ಪರೀಕ್ಷಾ ಕೇಂದ್ರದ ಮುಖ್ಯಸ್ಥರು, ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.